ಮನುಷ್ಯ ಜೀವನದಲ್ಲಿ ಬರುವ ಎಲ್ಲ ವಿಷಯಗಳ ಬಗ್ಗೆ ಚರ್ಚೆ ಮಾಡುವಾಗ ಜಾತಕ ಪರಿಶೀಲನೆ ನಡೆಯುತ್ತದೆ. ಹಾಗಾದರೆ ಜಾತಕ ಎಂದರೇನು, ಇದನ್ನು ಹೇಗೆ ತಯಾರಿಸಲಾಗುತ್ತದೆ ಎಂದು ತಿಳಿಯೋಣ.
ಹಿಂದಿನ ಸಂಚಿಕೆಗಳಲ್ಲಿ ರಾಶಿಗಳು, ಗ್ರಹಗಳು ಮತ್ತು ನಕ್ಷತ್ರಗಳ ಬಗ್ಗೆ ತಿಳಿದಿದ್ದೆವು. ಈ ಸಂಚಿಕೆಯಲ್ಲಿ ಜಾತಕ, ಲಗ್ನ ಮತ್ತು ಭಾವಗಳ ಬಗ್ಗೆ ತಿಳಿಯೋಣ.
ಯಾವುದೇ ವ್ಯಕ್ತಿಯ ಜನನ ಕಾಲಕ್ಕೆ ಚಂದ್ರನು ಯಾವ ರಾಶಿಯಲ್ಲಿ ಇರುತ್ತಾನೊ ಅದು ಆ ವ್ಯಕ್ತಿಯ ಜನ್ಮ ರಾಶಿ ಆಗುತ್ತದೆ ಎಂದು ತಿಳಿದಿರುವ ವಿಷಯ. ಮನುಷ್ಯನ ಜನನದ ಸಮಯದಲ್ಲಿ ಪೂರ್ವ ದಿಕ್ಕಿನಲ್ಲಿ ಉದಯವಾಗುವ ರಾಶಿಯ ಭಾಗಕ್ಕೆ ಲಗ್ನ ಎಂದು ಹೆಸರಿಸಿದ್ದಾರೆ.
ಹುಟ್ಟಿದ ಸಮಯಕ್ಕೆ ಸರಿಯಾಗಿ ಲಗ್ನ, ರಾಶಿ ಮತ್ತು ಉಳಿದ ಗ್ರಹಗಳನ್ನು ಪಂಚಾಂಗದ ಸಹಾಯದಿಂದ ಲೆಕ್ಕಾಚಾರ ಮಾಡಿ ಅವುಗಳು ಯಾವ ಯಾವ ರಾಶಿಯಲ್ಲಿ ಬರುತ್ತವೆ ಎಂದು ಗುರುತಿಸಿ ಒಂದು ನಕ್ಷೆಯಲ್ಲಿ ನಮೂದಿಸಲಾಯಿತು. ಈ ನಕ್ಷೆಗೆ ಜಾತಕ ಅಥವಾ ಕುಂಡಲಿ ಎಂದು ಕರೆಯಲಾಯಿತು. ಭಾರತದಲ್ಲಿ ಇದನ್ನು ಹಲವಾರು ವಿಧಗಳಲ್ಲಿ ನಮೂದಿಸುವ ಪದ್ಧತಿ ಇದೆ. ನಾವು ಭಾರತೀಯರು ಎಲ್ಲವನ್ನೂ ಹೆಚ್ಚಾಗಿ ಚೌಕ ಅಥವಾ ಆಯತಾಕಾರದಲ್ಲಿ ಜಾತಕ ತಯಾರಿಸುತ್ತವೆ. ಪಾಶ್ಚಾತ್ಯರು ವರ್ತುಲಾಕಾರದಲ್ಲಿ ನಮೂದಿಸುತ್ತಾರೆ.
ಉತ್ತರ ಭಾರತೀಯ ಶೈಲಿಯ ಜಾತಕ ಅಥವಾ ಕುಂಡಲಿ
ಈ ರೀತಿಯ ಕುಂಡಲಿಯನ್ನು ಉತ್ತರ ಭಾರತೀಯ ರಾಜ್ಯಗಳಲ್ಲಿ ಬಳಸಲಾಗುತ್ತದೆ. ಭೂಮಿಯು ಅಪ್ರದಕ್ಷಿಣಾಕಾರದಲ್ಲಿ ತಿರುಗುವುದರಿಂದ ಜನನ ಸಮಯದಲ್ಲಿ ಉದಯವಾಗುವ ಲಗ್ನವನ್ನು ಸಂಖ್ಯೆ ರೂಪದಲ್ಲಿ ಗುರುತಿಸಿ (ಮೇಷಕ್ಕೆ 1 ವೃಷಭಕ್ಕೆ 3.. ಇತ್ಯಾದಿ), ಉಳಿದ ರಾಶಿಗಳನ್ನು ಅಪ್ರದಕ್ಷಿಣಾಕಾರದಲ್ಲಿ ಗುರುತಿಸುವ ಪದ್ದತಿ ಇದಾಗಿದೆ. ಇದಕ್ಕೆ ಸಾಯನ ಪದ್ದತಿಯ ಜಾತಕ ಎಂದು ಕರೆಯಲಾಗಿದೆ. ಇಲ್ಲಿ ರಾಶಿಗಳ ಜಾಗಗಳು ಬದಲಾಗುತ್ತ ಇರುತ್ತವೆ. ಮೇಷ ಲಗ್ನವನ್ನು ಮಧ್ಯದಲ್ಲಿ ಅಂಕೆಯ ರೂಪದಿಂದ ಗುರುತಿಸಲಾಗಿದೆ.

ಪೂರ್ವ ಮತ್ತು ಬಂಗಾಳ ರಾಜ್ಯಗಳಲ್ಲಿ ಈ ಕೆಳಗಿನ ರೀತಿಯಲ್ಲಿ ಜಾತಕ ರಚಿಸಲಾಗುತ್ತದೆ. ಇಲ್ಲಿಯೂ ಸಹ ಉತ್ತರ ಭಾರತದ ಪದ್ದತಿಯಂತೆ ಅಪ್ರದಕ್ಷಿಣಾಕಾರದಲ್ಲಿ ರಾಶಿಗಳನ್ನು ಗುರುತಿಸಲಾಗುತ್ತದೆ. ಕನ್ಯಾ ಲಗ್ನವನ್ನು ಮಧ್ಯದಲ್ಲಿ ಅಂಕೆಯ ರೂಪದಿಂದ ಗುರುತಿಸಲಾಗಿದೆ.

ದಕ್ಷಿಣ ಭಾರತದಲ್ಲಿ ಸ್ಥಿರ ಅಥವಾ ನಿರಯನ ಕುಂಡಲಿ ರಚಿಸುವ ಪದ್ದತಿ ಜಾರಿಯಲ್ಲಿ ಇದೆ. ಇಲ್ಲಿ ರಾಶಿಗಳು ಯಾವಾಗಲೂ ನಿಶ್ಚಿತವಾದ ಭಾಗಗಳಲ್ಲಿ ಇರುತ್ತವೆ. ಮೇಷದಿಂದ ಮೀನ ರಾಶಿಯವರೆಗೆ ಪ್ರದಕ್ಷಿಣಾಕಾರದಲ್ಲಿ ರಚಿಸಲಾಗಿದೆ.

ಭಾರತದಲ್ಲಿ ಜಾತಕ ಬರೆಯುವ ಪದ್ದತಿಗಳು ಬೇರೆ ಬೇರೆ ಇದ್ದರೂ ಸಹ ಗ್ರಹಗಳ ಸ್ಥಾನ, ಬಲ ಮತ್ತು ಅಧ್ಯಯನಗಳ ರೀತಿ ಬೇರೆಯಾಗಿಲ್ಲ. ಹೀಗೆ ಜಾತಕ ರಚನೆಯಾದ ಮೇಲೆ ಲಗ್ನ ಮತ್ತು ಇತರ ಗ್ರಹಗಳ ಅವಸ್ಥೆಗಳ ಅಧಾರದ ಮೇಲೆ ಜಾತಕನ ಜೀವನದ ಆಗು ಹೋಗುಗಳನ್ನು ಅಧ್ಯಯನ ಮಾಡಲಾಗುತ್ತದೆ. ಜಾತಕದಲ್ಲಿ ಜನ್ಮ ಲಗ್ನಕ್ಕೆ ಬಹಳ ಮಹತ್ವ ಕೊಡಲಾಗಿದೆ. ಲಗ್ನದಿಂದ ಪ್ರಾರಂಭವಾಗಿ ಮುಂದಿನ ೧೨ ಮನೆಗಳೂ ಮನುಷ್ಯನ ದೇಹದ ಅಂಗಗಳನ್ನು ಮತ್ತು ಜೀವನದ ಮುಖ್ಯ ಅಂಶಗಳನ್ನು ಸೂಚಿಸುವಂತೆ ವಿಂಗಡಿಸಲಾಗಿದೆ. ಇವುಗಳನ್ನು ಭಾವಗಳು ಎಂದು ಕರೆಯಲಾಗಿದೆ. ಅವುಗಳನ್ನು ಈ ಕೆಳಗಿನಂತೆ ವಿಂಗಡಿಸಲಾಗಿದೆ.
ಲಗ್ನ /೧ನೇ ಮನೆ – ತನು ಭಾವ
೨ನೇ ಮನೆ- ಧನಭಾವ, ಕುಟುಂಬ ಭಾವ
೩ನೇ ಮನೆ-ಭ್ರಾತೃ ಭಾವ
೪ನೇ ಮನೆ – ಮಾತೃ ಭಾವ
೫ನೇ ಮನೆ – ಸಂತಾನ ಭಾವ
೬ನೇ ಮನೆ – ರಿಪು ಭಾವ
೭ನೇ ಮನೆ- ಕಳತ್ರ ಭಾವ
೮ನೇ ಮನೆ- ಆಯುಷ್ಯ ಭಾವ
೯ನೇ ಮನೆ- ಭಾಗ್ಯ ಭಾವ
೧೦ನೇ ಮನೆ- ಕರ್ಮ ಭಾವ
೧೧ನೇ ಮನೆ- ಲಾಭ ಭಾವ
೧೨ನೇ ಮನೆ- ವ್ಯಯ ಭಾವ
ಮುಂದಿನ ಸಂಚಿಕೆಗಳಲ್ಲಿ ಈ ವಿವರಗಳ ಸಹಾಯದಿಂದ ನಮ್ಮ ಜೀವನದ ಬಗ್ಗೆ ಹೇಗೆ ತಿಳಿಯಬಹುದು ಎಂದು ನೋಡೋಣ.

ಭಾವಫಲಗಳ ಕುರಿತಾದ ಉತ್ತಮ ಲೇಖನ. ಎಲ್ಲರಿಗೂ ಅರ್ಥಮಾಡಿಕೊಳ್ಳುವಂತಿದೆ. ಇದೇ ಸರಣಿಯಲ್ಲಿ ಮುಂದಿನ ಲೇಖನಗಳು ಬರಲಿ
LikeLiked by 1 person