ಅಯನಗಳು
ಸೂರ್ಯನು ನಮ್ಮ ಜೀವನದ ಅವಿಭಾಜ್ಯ ಅಂಗ ಎಂದು ನಮಗೆಲ್ಲ ತಿಳಿದೇ ಇದೆ. ಭೂಮಿಯು ಸೂರ್ಯನ ಸುತ್ತ ಒಂದು ಸುತ್ತು ತಿರುಗಲು ಅಂದಾಜು 365 ದಿನಗಳು ಬೇಕು. ಈ ಒಂದು ವರ್ಷದ ಚಲನೆಯಲ್ಲಿ ನಾವು ವಾತಾವರಣದಲ್ಲಿ ಬದಲಾವಣೆಗಳನ್ನು ಕಾಣುತ್ತೇವೆ. ಹಾಗೆಯೇ ಭೂಮಿಯ ಮೇಲೆ ಬೀಳುವ ಸೂರ್ಯನ ಕಿರಣಗಳ ಕೋನವು ಸಹ ಬದಲಾಗುತ್ತದೆ. ಪ್ರತಿ ದಿನ ಸೂರ್ಯೋದಯ ಮತ್ತು ಸೂರ್ಯಾಸ್ತ ಬಿಂದುಗಳನ್ನು ಒಂದು ನಿಶ್ಚಿತ ಜಾಗದಲ್ಲಿ ನಿಂತು ಗುರುತಿಸಿದಾಗ, ಆ ಬಿಂದುಗಳು ಪುಷ್ಯ ಮಾಸದಿಂದ ಆಷಾಢ ಮಾಸದವರೆಗೆ (ಡಿಸೆಂಬರ್ ತಿಂಗಳಿಂದ ಜೂನ್ ತಿಂಗಳವರೆಗೆ) ಉತ್ತರದ ಕಡೆಗೆ ಸರಿಯುತ್ತವೆ. ಮತ್ತು ನಂತರ ಆಷಾಢ ಮಾಸದಿಂದ ಪುಷ್ಯಮಾಸದವರೆಗೆ (ಜೂನ್ ತಿಂಗಳಿಂದ ಡಿಸೆಂಬರ್ ವರೆಗೆ) ದಕ್ಷಿಣದ ಕಡೆಗೆ ಸರಿಯುತ್ತವೆ. ಹೀಗೆ ಒಂದು ವರ್ಷದ ಚಲನೆಯಲ್ಲಿ ಸೂರ್ಯನ ಉತ್ತರಾಭಿಮುಖ ಮತ್ತು ದಕ್ಷಿಣಾಭಿಮುಖ ಚಲನೆಗಳನ್ನು ಗಮನಿಸಿ ಪಂಚಾಂಗದಲ್ಲಿ ಒಂದು ವರ್ಷದಲ್ಲಿ ಎರಡು ಅಯನಗಳನ್ನು ಅಳವಡಿಸಲಾಯಿತು. ಅವುಗಳಿಗೆ ಉತ್ತರಾಯಣ ಮತ್ತು ದಕ್ಷಿಣಾಯಣ ಎಂದು ಹೆಸರಿಸಲಾಯಿತು.ಅಯನ ಎಂದರೆ ನಿಶ್ಚಿತ ಚಲನೆಯ ಪಥ ಎಂದರ್ಥ.
ಭಾರತದಲ್ಲಿ ಈಗಲೂ ಸಹ ನಾವು ಸೂರ್ಯ ಮಕರ ರಾಶಿ ಪ್ರವೇಶಿಸಿದಾಗ ಉತ್ತರಾಯಣದ ಪ್ರಾರಂಭವೆಂದು ಜನವರಿ ತಿಂಗಳಲ್ಲಿ “ಮಕರ ಸಂಕ್ರಮಣ” ವನ್ನು ಹಬ್ಬವಾಗಿ ಆಚರಿಸುತ್ತೇವೆ. ಮಕರದಿಂದ ಮುಂದೆ ಕುಂಭ,ಮೀನ, ಮೇಷ, ವೃಷಭ, ಮಿಥುನ ರಾಶಿಗಳಲ್ಲಿ ಸೂರ್ಯನು ಉತ್ತರಾಭಿಮುಖವಾಗಿ ಸಂಚರಿಸುತ್ತಾನೆ. ಕರ್ಕ ರಾಶಿಯ ಸಂಕ್ರಾಂತಿಯಿಂದ ಮುಂದೆ ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು ಮತ್ತು ಮಕರ ಸಂಕ್ರಮಣದವರೆಗೆ ಸೂರ್ಯನು ದಕ್ಷಿಣಾಭಿಮುಖವಾಗಿ ಸಂಚರಿಸುತ್ತಾನೆ. ಶಿಶಿರ, ವಸಂತ ಮತ್ತು ಗ್ರೀಷ್ಮ ಋತುಗಳು ಉತ್ತರಾಯಣ ಕಾಲದಲ್ಲಿ ಬರುತ್ತವೆ. ವರ್ಷ,ಶರದ್ ಮತ್ತು ಹೇಮಂತ ಋತುಗಳು ದಕ್ಷಿಣಾಯಣ ಕಾಲದಲ್ಲಿ ಬರುತ್ತವೆ. ನಾರದ ಪುರಾಣದಲ್ಲಿ ಇವುಗಳ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಮಾನವ ಶರೀರದಲ್ಲಿ ಸೂಕ್ಷ್ಮತೆ ಮತ್ತು ತೀವ್ರತೆಗಳು ಬ್ರಹ್ಮಾಂಡದಲ್ಲಿ ಆಗುವ ಬದಲಾವಣೆಗಳಿಂದ ಆಗುತ್ತವೆ. ಆದರೆ ನಮಗೆ ಸಾಮಾನ್ಯವಾಗಿ ಅದರ ಅರಿವು ಕಂಡುಬರುವುದಿಲ್ಲ. ಉತ್ತರಾಯಣದಲ್ಲಿ ಸೂರ್ಯನ ಕಿರಣಗಳ ತಾಪವು ಮಾನವ ಶರೀರಕ್ಕೆ ಬಹಳ ಆರೋಗ್ಯಕಾರಿ ಮತ್ತು ಆಹ್ಲಾದಕಾರಿಯಾಗಿರುತ್ತವೆ. ಪಚನ ಕ್ರಿಯೆ ಮತ್ತು ಇತರೆ ಅಂಗಗಳ ಕ್ರಿಯೆಗಳಿಗೆ ಬಹಳ ಸಹಾಯಕಾರಿಯಾಗಿರುತ್ತವೆ. ಉತ್ತರಾಯಣದ ಸೂರ್ಯನು ಭೂಮಿಯ ಮೇಲೆ ಎಲ್ಲ ಜೀವರಾಶಿಗಳಿಗೂ ಹೊಸ ಚೈತನ್ಯ ಕೊಡುತ್ತಾನೆ. ಗಿಡಮರಗಳು ಚಿಗೊರೊಡೆಯುತ್ತವೆ. ಆದ್ದರಿಂದ ಉತ್ತರಾಯಣ ಕಾಲವು ಜ್ಞಾನೋದಯಕ್ಕೆ ಮತ್ತು ದಕ್ಷಿಣಾಯಣ ಕಾಲವು ಶುದ್ದೀಕರಣಕ್ಕೆ ಮೀಸಲಿಡಲಾಗಿದೆ ಎಂದು ಪುರಾಣಗಳಿಂದ ತಿಳಿಯಬಹುದು. ದಕ್ಷಿಣಾಯಣ ಕಾಲದಲ್ಲಿ ಸೂರ್ಯನ ಕಿರಣಗಳ ತಾಪವು ಕಡಿಮೆ ಇರುವುದರಿಂದ ಮನುಷ್ಯನ ದೇಹದ ಪಚನ ಕ್ರಿಯೆ ಮತ್ತು ರೋಗನಿರೋಧಕ ಶಕ್ತಿಯು ಕುಂದಬಹುದು. ಆದ್ದರಿಂದ ನಮ್ಮ ಪೂರ್ವಜರು ಉಪವಾಸ, ವ್ರತ ಮತ್ತು ಧ್ಯಾನಗಳನ್ನು ಆ ಸಮಯದಲ್ಲಿ ಅಳವಡಿಸಿರಬಹುದೆಂದು ತಿಳಿಯಲಾಗಿದೆ. ಪುರಾಣಗಳಲ್ಲಿ ಉತ್ತರಾಯಣ ಕಾಲದ ಮತ್ತು ದಕ್ಷಿಣಾಯಣ ಕಾಲದ ಬಗ್ಗೆ ಅನೇಕ ಕಥೆಗಳು ಇವೆ.
ಋತುಗಳು
ಭೂಮಿಯು ಸೂರ್ಯನ ಸುತ್ತ ತನ್ನ ಕಕ್ಷೆಯಲ್ಲಿ ಒಂದು ಪೂರ್ಣ ಸುತ್ತು ತಿರುಗಿ ಬರಲು ಒಂದು ವರ್ಷ ಬೇಕಾಗುತ್ತದೆ. ಹೀಗೆ ತಿರುಗುವಾಗ ಸೂರ್ಯನ ಕಿರಣಗಳು ಭೂಮಿಯ ಮೇಲೆ ಬೀಳುವ ಕೋನಗಳು ಬದಲಾಗುತ್ತಿರುತ್ತವೆ. ಆಗ ಹವಾಮಾನದಲ್ಲಿ ಮತ್ತು ನಿಸರ್ಗದಲ್ಲಿ ಬದಲಾವಣೆ ಉಂಟಾಗುತ್ತದೆ. ಈ ಬದಲಾವಣೆಗಳು ನಿರ್ಧಿಷ್ಟವಾಗಿರುತ್ತವೆ. ಇವುಗಳಿಗೆ ಋತುಗಳು ಎಂದು ಕರೆಯಲಾಯಿತು.
ಸಂಸ್ಕೃತದಲ್ಲಿ ಋತು ಎಂದರೆ ನಿರ್ಧಿಷ್ಟ ಬದಲಾವಣೆ ಎಂದರ್ಥ. ಒಂದು ವರ್ಷದಲ್ಲಿ ಋತುಗಳು ನಿರ್ಧಿಷ್ಟ ಕಾಲದಲ್ಲಿ ಒಂದರ ನಂತರ ಒಂದರಂತೆ ಪುನರಾವರ್ತನೆಗೊಳ್ಳುತ್ತವೆ. ಋತುಗಳಿಗೆ ಅವುಗಳು ಹೇಗೆ ವಾತಾವರಣದಲ್ಲಿ ಅನುಭವಕ್ಕೆ ಬರುತ್ತವೆಯೋ ಹಾಗೆಯೇ ಹೆಸರಿಸಲಾಗಿವೆ. ಎಲ್ಲ ಹೆಸರುಗಳ ಮೂಲ ಸಂಸ್ಕೃತ ಭಾಷೆಯಾಗಿದೆ. ಅವುಗಳು ಹೀಗಿವೆ. ವಸಂತ ಋತು, ಗ್ರೀಷ್ಮ ಋತು, ವರ್ಷ ಋತು, ಶರದ್ ಋತು, ಹೇಮಂತ ಋತು, ಶಿಶಿರ ಋತು. ಭಾರತದಲ್ಲಿ ಸಾಮಾನ್ಯವಾಗಿ ಒಂದು ಋತು ಎರಡು ಚಾಂದ್ರಮಾನ ಮಾಸಗಳಿಗೆ ಸಮನಾಗಿರುತ್ತದೆ. ಅವುಗಳು ಹೀಗಿವೆ.
ವಸಂತ ಋತು (ಚೈತ್ರ-ವೈಶಾಖ), ಗ್ರೀಷ್ಮ ಋತು (ಜ್ಯೇಷ್ಠ-ಆಷಾಢ), ವರ್ಷ ಋತು (ಶ್ರಾವಣ-ಭಾದ್ರಪದ), ಶರದ್ ಋತು (ಆಶ್ವೀಜ-ಕಾರ್ತೀಕ), ಹೇಮಂತ ಋತು (ಮಾರ್ಗಶೀರ್ಷ-ಪುಷ್ಯ), ಶಿಶಿರ ಋತು (ಮಾಘ-ಫಾಲ್ಗುಣ).
ಸಂವತ್ಸರಗಳು
ಸಂಸ್ಕೃತದಲ್ಲಿ ಸಂವತ್ಸರ ಎಂದರೆ ಒಂದು ವರ್ಷ ಎಂದು ಅರ್ಥ. ಚಾಂದ್ರಮಾನ ಒಂದು ವರ್ಷವನ್ನು ಸಂವತ್ಸರ ಎಂದು ಕರೆಯುತ್ತಾರೆ. ಒಟ್ಟು 60 ಸಂವತ್ಸರಗಳ ಒಂದು ಚಕ್ರವನ್ನು ರಚಿಸಲಾಗಿದೆ. ಈ ಸಂವತ್ಸರಗಳನ್ನು ಬೃಹಸ್ಪತಿ ಅಂದರೆ ಗುರು ಗ್ರಹದ ಚಲನೆಯ ಅಧಾರದ ಮೇಲೆ ರಚಿಸಲಾಗಿದೆ ಎಂದು ಕೆಲ ಪುರಾಣಗಳು ಮತ್ತು ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಗುರು ಗ್ರಹವು ಕಾಂತಿವೃತ್ತದ ಸುತ್ತ ಒಂದು ಪ್ರದಕ್ಷಿಣೆ ಮುಗಿಸಲು 12 ವರ್ಷಗಳ ಕಾಲಾವಧಿ ಬೇಕು. ಅಂದರೆ ಪ್ರತಿ ರಾಶಿಯಲ್ಲಿ ಗುರು ಗ್ರಹವು ಅಂದಾಜು ಒಂದು ವರ್ಷಗಳ ಕಾಲ ಸಂಚರಿಸುತ್ತದೆ. 5 ವರ್ಷಗಳ ಗುರು ಗ್ರಹದ ಅವಧಿಗೆ “ಬ್ರಾಹಸ್ಪತ್ಯ ಅಥವಾ ಸಂವತ್ಸರ ಯುಗ” ಎಂದು ಕರೆಯಲಾಯಿತು. ಇಂತಹ 12 ಬ್ರಾಹಸ್ಪತ್ಯ ಯುಗಗಳು ಸೇರಿ 60 ವರ್ಷಗಳ ಒಂದು ಚಕ್ರ ರಚಿಸಲಾಯಿತು. ಅವುಗಳೇ ಸಂವತ್ಸರಗಳು. ಗುರು ಗ್ರಹವು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಾಗಲು ತೆಗೆದುಕೊಳ್ಳುವ ಸರಾಸರಿ ಚಲನೆಯ ಸಮಯವೇ ಸಂವತ್ಸರ.
ಅವುಗಳ ಹೆಸರುಗಳು ಈ ಕೆಳಗಿನಂತಿವೆ.
ಪ್ರಭವ, ವಿಭವ, ಶುಕ್ಲ, ಪ್ರಮೋದೂತ/ಪ್ರಮೋದ, ಪ್ರಜೋತ್ಪತ್ತಿ/ಪ್ರಜಾಪತಿ, ಆಂಗೀರಸ, ಶ್ರೀಮುಖ, ಭಾವ, ಯುವ, ಧಾತ್ರೀ/ಧಾತು, ಈಶ್ವರ, ಬಹುಧಾನ್ಯ, ಪ್ರಮಾಥಿ, ವಿಕ್ರಮ, ವೃಷ ಅಥವಾ ವಿಷು, ಚಿತ್ರಭಾನು, ಸ್ವಭಾನು, ತಾರಣ, ಪಾರ್ಥಿವ, ವ್ಯಯ, ಸರ್ವಜಿತ್, ಸರ್ವಧಾರೀ, ವಿರೋಧಿ, ವಿಕೃತು, ಖರ, ನಂದನ, ವಿಜಯ, ಜಯ, ಮನ್ಮಥ, ದುರ್ಮುಖಿ, ಹೇವಿಳಂಬಿ, ವಿಳಂಬಿ, ವಿಕಾರಿ, ಶಾರ್ವರಿ, ಪ್ಲವ, ಶುಭಕೃತ್, ಶೋಭಕೃತ್, ಕ್ರೋಧಿ, ವಿಶ್ವಾವಸು, ಪರಾಭವ, ಪ್ಲವಂಗ, ಕೀಲಕ, ಸೌಮ್ಯ, ಸಾಧಾರಣ, ವಿರೋಧಿಕೃತ್, ಪರಿಧಾವಿ, ಪ್ರಮಾದೀ, ಆನಂದ, ರಾಕ್ಷಸ, ನಳ, ಪಿಂಗಳ, ಕಾಳಯುಕ್ತಿ/ಕಾಲಯುಕ್ತಾಕ್ಷಿ, ಸಿದ್ಧಾರ್ಥಿ, ರುದ್ರ/ರೌದ್ರಿ, ದುರ್ಮತಿ, ದುಂದುಭಿ, ರುಧಿರೋದ್ಗಾರಿ, ರಕ್ತಾಕ್ಷಿ, ಕ್ರೋಧನ, ಕ್ಷಯ/ ಅಕ್ಷಯ.
60 ಸಂವತ್ಸರಗಳನ್ನು 3 ಭಾಗಗಳಲ್ಲಿ ವಿಂಗಡಿಸಲಾಗಿವೆ. ಮೊದನೆಯ 20 ಸಂವತ್ಸರಗಳನ್ನು ಬ್ರಹ್ಮ ವಿಂಶತಿಕ (ರಜಸ್ ಗುಣಗಳನ್ನು ಬಿಂಬಿಸುತ್ತವೆ), ಎರಡನೆಯ 20(21-40)ಸಂವತ್ಸರಗಳನ್ನು ವಿಷ್ಣು ವಿಂಶತಿಕ (ಸತ್ವ ಗುಣಗಳನ್ನು ಬಿಂಬಿಸುತ್ತವೆ), ಮತ್ತು 3ನೆಯ 20(41-60) ಸಂವತ್ಸರಗಳನ್ನು ರುದ್ರ ವಿಂಶತಿಕ (ತಮೋ ಗುಣಗಳನ್ನು ಬಿಂಬಿಸುತ್ತವೆ) ಎಂದು ವಿಭಜಿಸಲಾಗಿವೆ.
ಪ್ರತಿ ಸಂವತ್ಸರವು ಚಾಂದ್ರಮಾನ ಚೈತ್ರಮಾಸದ ಶುಕ್ಲ ಪಕ್ಷ ಪ್ರತಿಪದೆಯಂದು ಪ್ರಾರಂಭವಾಗುತ್ತದೆ. ಆ ದಿನವನ್ನು ಚಾಂದ್ರಮಾನ ಯುಗಾದಿ ಎಂದು ಹಬ್ಬವನ್ನಾಗಿ ಭಾರತದ ವಿವಿಧ ಪ್ರದೇಶಗಳಲ್ಲಿ ಆಚರಿಸಲಾಗುತ್ತದೆ. ಯುಗಾದಿ ಎಂದರೆ ಯುಗದ ಆರಂಭ ಎಂದು ಅರ್ಥ. ಈ ಸಮಯದಲ್ಲಿ ಉತ್ತರಾಯಣ ಕಾಲ, ವಸಂತ ಋತುವಿನ ಪ್ರಾರಂಭ ಮತ್ತು ಸಮಶೀತೋಷ್ಣ, ಉತ್ಸಾಹವರ್ಧಕ ಮತ್ತು ಆಹ್ಲಾದಕರ ವಾತಾವರಣ ಇರುತ್ತದೆ. ಗಿಡಮರಗಳಿಗೆ ಹೊಸ ಚಿಗುರು ಬರುವ ಸಮಯ.
ಪ್ರಭವಾದಿಯಾಗಿ 60 ಸಂವತ್ಸರಗಳ ಬಾರಿ ಮುಗಿದ ಮೇಲೆ ಮತ್ತೆ ಪ್ರಭವ ಸಂವತ್ಸರದಿಂದ ಶುರುವಾಗುತ್ತದೆ. ಸದ್ಯ ನಾವೀಗ 2020ನೇ ಇಸವಿಯ ಶಾರ್ವರೀ ಸಂವತ್ಸರದಲ್ಲಿದ್ದೇವೆ. ಮುಂದಿನ ಸಂಚಿಕೆಯಲ್ಲಿ ಇನ್ನೂ ಹೆಚ್ಚಿನ ವಿಷಯಗಳನ್ನು ತಿಳಿಯೋಣ.
(ಆಧಾರ: ನಾರದ ಪುರಾಣ, ಸ್ಕಂದ ಪುರಾಣ ಮತ್ತು ಸೂರ್ಯ ಸಿದ್ಧಾಂತ)

ಉತ್ತಮವಾದ ಮಾಹಿತಿ. ನಿಜ. ಗಿಡಮರಗಳಾದ ಮಾವು, ಹಲಸು ಮೊದಲಾದವುಗಳು ಋುತುಗಳನ್ನು ಆಧರಿಸಿಯೇ ಫಲಗಳನ್ನು ನೀಡುತ್ತವೆ. ಮಾನವನೂ ನಿಸರ್ಗದಲ್ಲಿನ ಒಂದು ಜೀವಿಯಾದ್ದರಿಂದ ಮಾನವನ ಶರೀರವೂ ಋುತುಗಳ ಪ್ರಭಾವಕ್ಕೆ ಒಳಪಡಲೇಬೇಕು.
LikeLiked by 1 person