ಹಿಂದೂ ಜ್ಯೋತಿಷ ಅಥವಾ ಭಾರತೀಯ ಜ್ಯೋತಿಷವು ಕನಿಷ್ಟ ಪಕ್ಷ 6000 ವರ್ಷ ಹಳೆಯ ಶಾಸ್ತ್ರ ಮತ್ತು ಪ್ರಪಂಚದ ಅತಿ ಹಳೆಯ ಪದ್ಧತಿಗಳಲ್ಲಿ ಒಂದಾಗಿದೆ.
ನಾನು ತಂದೆಯವರಿಂದ ಜ್ಯೋತಿಷ ಕಲಿಯುವಾಗ ಮೊದಲು ಕೇಳಿದ ಪ್ರಶ್ನೆ “ಈ ಜಗತ್ತು ಹೇಗೆ ಪ್ರಾರಂಭ ಆಯಿತು ಮತ್ತು ಈ ಗ್ರಹಗಳಿಗೂ ಮನುಷ್ಯನಿಗೂ ಯಾವ ಸಂಬಂಧಗಳಿವೆ” ಅಂತ. ಆಗ ತಂದೆಯವರು ಪ್ರಾರಂಭ ಮಾಡಿದ್ದು ಪರಾಶರರ ಹೋರಾ ಶಾಸ್ತ್ರ ಗ್ರಂಥದ ಮೊದಲನೆ ಅಧ್ಯಾಯದಿಂದ.
ಮೈತ್ರೇಯ ಮುನಿಗಳು ಪರಾಶರ ಮಹರ್ಷಿಗಳ ಶಿಷ್ಯರಾಗಿದ್ದರು. ಮೈತ್ರೆಯರು ಪರಾಶರರಿಗೆ ವಿಶ್ವದ ಸೃಷ್ಟಿಯ ಮತ್ತು ಭೂಮಿಯ ಮೇಲೆ ಮಾನವನ ಜೀವನಕ್ಕೂ ಗ್ರಹಗಳಗೂ ಸಂಬಂಧಗಳ ಬಗ್ಗೆ ಕೇಳಿದಾಗ, ಪರಾಶರರು ಬ್ರಹ್ಮಾಂಡ ಮತ್ತು ಜ್ಯೋತಿಷದ ಬಗ್ಗೆ ವಿವರಿಸುತ್ತಾರೆ.
ಸೂರ್ಯಃ ಪಿತಾಮಹೊ ವ್ಯಾಸೊ ವಸಿಷ್ಠೋತ್ರಿಃ ಪರಾಶರಃ|
ಕಶ್ಯಪೊ ನಾರದೊ ಗರ್ಗೊ ಮರೀಚಿರ್ಮನುರಂಗೀರಾಃ||
ಲೋಮಶಃ ಪೌಲಿಶಶ್ಚೈವ ಚ್ಯವನೊ ಯವನೊ ಭೃಗುಃ |
ಶೌನಕೋಷ್ಟಾದಶಾಶ್ಚೈತೆ ಜ್ಯೋತಿಃ ಶಾಸ್ತ್ರ ಪ್ರವರ್ತಕಾ: ||
ಸಂಪೂರ್ಣ ಜ್ಯೋತಿಷ ಶಾಸ್ತ್ರವನ್ನು ಹಿರಣ್ಯಗರ್ಭನು (ಪರಬ್ರಹ್ಮ) ಸೃಷ್ಟಿಕರ್ತನಾದ ಬ್ರಹ್ಮನಿಗೆ ಉಪದೇಶಿಸಿದನು. ನಂತರ ಬ್ರಹ್ಮನು ತನ್ನ ಉಪಾಸಕರಾದ ೧೮ ಋಷಿಗಳಿಗೆ ಉಪದೇಶಿಸಿದನು. ಈ ೧೮ ಋಷಿಗಳಲ್ಲಿ ಸೂರ್ಯ, ಪಿತಾಮಹ, ವ್ಯಾಸ, ವಸಿಷ್ಠ, ಅತ್ರಿ, ಪರಾಶರ, ಕಶ್ಯಪ, ನಾರದ, ಗರ್ಗ, ಮರೀಚಿ, ಮನು, ಆಂಗೀರ, ಲೋಮಶ, ಪೌಲಸ್ತ್ಯ, ಚ್ಯವನ, ಯವನ, ಬೃಗು, ಮತ್ತು ಶೌನಕ. ಇವರು ಜ್ಯೋತಿಷ ಶಾಸ್ತ್ರದ ಮೂಲ ಪ್ರವರ್ತಕರು.
ಇವರುಗಳದ್ದೇ ಆದ ೧೮ ಸಿದ್ಧಾಂತಗಳು ಇದ್ದವು. ಇವುಗಳಲ್ಲಿ ಸೂರ್ಯ ಸಿದ್ಧಾಂತವು ಹೆಚ್ಚು ಬಳಕೆಯಲ್ಲಿ ಇರುವುದು.
ಭಗವಾನ ಶ್ರೀ ವಿಷ್ಣು ಬ್ರಹ್ಮಾಂಡವನ್ನು ರಚಿಸಿದನು. ಭಗವಂತನು ಎಲ್ಲಾ ಜೀವಿಗಳಲ್ಲಿ ಇದ್ದಾನೆ ಮತ್ತು ಇಡೀ ಬ್ರಹ್ಮಾಂಡವು ಅವನಲ್ಲಿದೆ.
ಸತ್ವ ಗುಣದೊಂದಿಗೆ ಶ್ರೀ ಶಕ್ತಿ (ತಾಯಿ ಲಕ್ಷ್ಮಿ), ರಜೋಗುಣದೊಂದಿಗೆ ಭೂ ಶಕ್ತಿ (ಭೂಮಿ ತಾಯಿ) ಮತ್ತು ತಮೊಗುಣದೊಂದಿಗೆ ನೀಲ ಶಕ್ತಿ ಮತ್ತು ಈ ಮೂವರನ್ನು ಹೊರತುಪಡಿಸಿ, ಶ್ರೀ ಶಕ್ತಿ ಮತ್ತು ಭೂ ಶಕ್ತಿಯಿಂದ ಪ್ರಭಾವಿತನಾದ ನಾಲ್ಕನೇ ವಿಧದ ವಿಷ್ಣು, ತಮೋ ಗುಣದೊಂದಿಗೆ ಸಂಕರ್ಷಣ (ರಜೋಗುಣದೊಂದಿಗೆ ಪ್ರದ್ಯುಮ್ನ ಮತ್ತು ಸತ್ವ ಗುಣದೊಂದಿಗೆ ಅನಿರುದ್ಧನ) ರೂಪವನ್ನು ಪಡೆಯುತ್ತಾನೆ.
ಧರ್ಮ ಸಂಸ್ಥಾಪನೆಯ ಸಲುವಾಗಿ ಮತ್ತು ದೈತ್ಯರ ಬಲವನ್ನು ಕಡಿಮೆ ಮಾಡಿ ದೈವ ಬಲವನ್ನು ಹೆಚ್ಚು ಮಾಡಲು ವಿಷ್ಣುವು ನವಗ್ರಹಗಳಾಗಿ ಅವತರಿಸಿದನು.
ಈ ಗ್ರಹಗಳು ವ್ಯಕ್ತಿಗಳಿಗೆ ಅವರ ಕರ್ಮಗಳು ಅಥವಾ ಕಾರ್ಯಗಳ ಆಧಾರದ ಮೇಲೆ ಫಲಿತಾಂಶಗಳನ್ನು ನೀಡುತ್ತವೆ. ಸೂರ್ಯನಿಂದ ರಾಮನ ಅವತಾರ, ಚಂದ್ರನಿಂದ ಕೃಷ್ಣನ, ಮಂಗಳದಿಂದ ನರಸಿಂಹ, ಬುದನಿಂದ ಬುದ್ಧ, ಗುರುನಿಂದ ವಾಮನ, ಶುಕ್ರನಿಂದ ಪರಶುರಾಮನ, ಶನಿಯಿಂದ ಕೂರ್ಮ, ರಾಹುವಿನಿಂದ ವರಾಹ ಮತ್ತು ಕೇತುವಿನಿಂದ ಮೀನ ಅವತಾರ ಸಂಭವಿಸಿತು. ಇವುಗಳನ್ನು ಹೊರತುಪಡಿಸಿ ಇತರ ಎಲ್ಲಾ ಅವತಾರಗಳು ಸಹ ಗ್ರಹಗಳ ಮೂಲಕವೆ ಆಗಿವೆ. ಈ ಅವತಾರ ತಾಳಿದವರೆಲ್ಲ ತಮ್ಮ ಗುರಿ ಸಾಧಿಸಿದ ನಂತರ ತಮ್ಮ ಗ್ರಹಗಳನ್ನು ಸೇರುತ್ತಾರೆ ಎಂದು ಪರಾಶರರು ಹೇಳುತ್ತಾರೆ.
ಭಾರತೀಯ ಜ್ಯೋತಿಷವು ಜ್ಯೋತಿಷವು ವೇದಗಳ ಒಂದು ಅಂಗ
ವೇದಗಳು ಭಾರತದ ಧಾರ್ಮಿಕ ಗ್ರಂಥಗಳು. ಒಟ್ಟು 4 ವೇದಗಳಿವೆ. ಅವುಗಳು ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವಣ ವೇದ. ಇವು ಭಾರತದ ಹಿಂದೂ ಧರ್ಮದ ಅತೀ ಪ್ರಾಚೀನ ಸಂಸ್ಕೃತ ಸಾಹಿತ್ಯ ಮತ್ತು ಗ್ರಂಥಗಳು.
ಶತಮಾನಗಳ ಮೊದಲು ಈ ವೇದಗಳನ್ನು ಅರ್ಥ ಮಾಡಿಕೊಳ್ಳಲು ಮತ್ತು ವ್ಯಾಖ್ಯಾನಿಸಲು 6 ವೇದಾಂಗಗಳನ್ನು ರಚಿಸಲಾಯಿತು. ಆ ವೇದಾಂಗಗಳು ಹೀಗಿವೆ: ಶಿಕ್ಷಾ, ಛಂದಸ್ಸು, ವ್ಯಾಕರಣ, ನಿರುಕ್ತ, ಕಲ್ಪ ಮತ್ತು ಜ್ಯೋತಿಷ.
ಶಿಕ್ಷಾ—– ಸಂಸ್ಕೃತ ಭಾಷೆಯ ಸರಿಯಾದ ಉಚ್ಚಾರಣೆಗಾಗಿ
ಛಂದಸ್ಸು— ಸಂಸ್ಕೃತ ಪದ್ಯಗಳ ರಚನಾ ಶಾಸ್ತ್ರ ತಿಳುವಳಿಕೆಗಾಗಿ
ವ್ಯಾಕರಣ— ಸಂಸ್ಕೃತ ಭಾಷೆಯ ಸರಿಯಾದ ತಿಳುವಳಿಕೆಗಾಗಿ
ನಿರುಕ್ತ—- ಸಂಸ್ಕೃತ ಶಬ್ದಗಳ ಉತ್ಪತ್ತಿ ತಿಳುವಳಿಕೆಗಾಗಿ
ಕಲ್ಪ— –ವೈದಿಕ ಆಚರಣೆಗಳನ್ನು ಹೇಗೆ ಮಾಡುವುದು ಮತ್ತು
ಮತ್ತು ಜ್ಯೋತಿಷ—- ಕಾಲಮಾನಗಳ ಮತ್ತು ಗ್ರಹಗಳ ಚಲನೆ ತಿಳುವಳಿಕೆಗಾಗಿ
ಭಾಸ್ಕರಾಚರ್ಯರು ಹೇಳುತ್ತಾರೆ
ಶಬ್ಧಶಾಸ್ತ್ರಂ ಮುಖಂ ಜ್ಯೋತಿಷಂ ಚಕ್ಷುಷೀ ಶ್ರೋತ್ರಮುಕ್ತಂ ನಿರುಕ್ತಂ ಕಲ್ಪಃ ಕರೌ||
ಯಾ ತು ಶಿಕ್ಷಾಸ್ಯ ವೇದಸ್ಯ ನಾಸಿಕಾ ಪಾದಪದ್ಮದ್ವಯಂ ಛಂದ ಆಧ್ಯೈರ್ಬುಧೈಃ||
ವ್ಯಾಕರಣ ವೇದಗಳ ಮುಖ, ಜ್ಯೋತಿಷ ಕಣ್ಣುಗಳು, ನಿರುಕ್ತ ಕಿವಿಗಳು, ಕಲ್ಪ ಕೈಗಳು, ಶಿಕ್ಷಾ ಮೂಗು ಮತ್ತು ಛಂದಸ್ಸು ೨ ಕಾಲುಗಳು ಅಂತ.
ಜ್ಯೋತಿಷವನ್ನು ಪ್ರತ್ಯಕ್ಷ ಪ್ರಮಾಣವಾದ ಶಾಸ್ತ್ರ ಎನ್ನುತ್ತಾರೆ. ಹೇಗೆ ಪ್ರತಿ ನಿತ್ಯ ನಾವು ಸೂರ್ಯನ ಕಿರಣಗಳನ್ನು,ನೀರಿನಲ್ಲಿ ಚಂದ್ರನ ಸೆಳೆತವನ್ನು ಕಣ್ಣಾರೆ ಪ್ರತ್ಯಕ್ಷ ನೋಡಿ ಅನುಭವಿಸುತ್ತೆವೆಯೊ ಹಾಗೆ ಬೇರೆ ಗ್ರಹಗಳು ಮನುಷ್ಯನ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂದು ಹೇಳುವುದೇ ಫಲ ಜ್ಯೋತಿಷ.
ಮನುಷ್ಯನ ಹುಟ್ಟಿದ ಸಮಯದಲ್ಲಿ ಗ್ರಹಗಳ ಸ್ಥಿತಿಗಳ ಅಧಾರದ ಮೇಲೆ ಅವನ ವ್ಯಕ್ತಿತ್ವ, ಸ್ವಭಾವ ಮತ್ತು ಭವಿಷ್ಯದ ಬಗ್ಗೆ ಹೇಳುವ ಪದ್ಧತಿಗೆ ಜ್ಯೋತಿಷ ಶಾಸ್ತ್ರ ಅಂತ ಹೆಸರು.
ಜ್ಯೋತಿಷ ಶಾಸ್ತ್ರದ ಬೆಳವಣಿಗೆ
- ಮಹರ್ಷಿ ಪರಾಶರರ ” ಬೃಹತ್ ಪರಾಶರ ಹೋರಾ ಶಾಸ್ತ್ರ ” ಗ್ರಂಥವು ಈಗಲೂ ಲಭ್ಯವಿದೆ ಮತ್ತು ಕಲಿಯುವವರಿಗೆ ಅತ್ತ್ಯುತ್ತಮ ಗ್ರಂಥವಾಗಿದೆ.
- ಮಹರ್ಷಿ ವೇದವ್ಯಾಸರ ಪ್ರಕಾರ ಜ್ಯೋತಿಷ ಶಾಸ್ತ್ರ ವಿಭಾಗದಲ್ಲಿ ೪ ಲಕ್ಷ ಶ್ಲೋಕಗಳಿವೆ. ಆದರೆ ದೌರ್ಭಾಗ್ಯವೇನೇಂದರೆ ನಮಗೆ ಅವೆಲ್ಲ ಈಗ ಲಭ್ಯವಿಲ್ಲ.
- ರಾಮಾಯಣದಲ್ಲಿ ೭ ಕಾಂಡಗಳಲ್ಲಿಯೂ ಸಹ ಜ್ಯೋತಿಷದ ಹಲವಾರು ವಿಷಯಗಳ ಬಗ್ಗೆ ಬಳಸಲಾಗಿದೆ. ರಾಮ ಹುಟ್ಟಿನಿಂದ ಹಿಡಿದು ಉಪನಯನ, ಮದುವೆ, ರಾಜ್ಯಾಭಿಷೇಕಗಳಲ್ಲಿ ಪಂಚಾಂಗ ಮತ್ತು ಜ್ಯೋತಿಷದ ಬಳಕೆ ಮಾಡಲಾಗಿದೆ.
- ಮಹಾಭಾರತದ ಕೆಲವು ಕಡೆಗಳಲ್ಲಿ ಜ್ಯೋತಿಷದ ಬಗ್ಗೆ ಮಾಹಿತಿಗಳು ಲಭ್ಯವಿವೆ. ಮಹರ್ಷಿ ವೇದವ್ಯಾಸರು ಪರಾಶರ ಮಹರ್ಷಿಗಳ ಪುತ್ರ. ಮೈತ್ರೇಯ ಮುನಿಗಳು ಪರಾಶರ ಮಹರ್ಷಿಗಳ ಶಿಷ್ಯರಾಗಿದ್ದರು. ಮಹಾಭಾರತದ ಪಾಂಡು ಮತ್ತು ಧೃತರಾಷ್ಟ್ರನ ಸಹೋದರನಾದ ವಿದುರನು ಮೈತ್ರೇಯ ಮಹರ್ಷಿಗಳ ಶಿಷ್ಯ. ಹೀಗಾಗಿ ನಾವು ಮಹಾಭಾರತದಲ್ಲಿ ಮತ್ತು ಶ್ರೀಮದ್ ಭಾಗವತ ಪುರಾಣದಲ್ಲಿ ಮೈತ್ರೆಯ ಮಹರ್ಷಿಗಳ ಹೆಸರನ್ನು ಕೇಳುತ್ತೇವೆ ಮತ್ತು ಜ್ಯೋತಿಷ ಸಂಬಂಧ ವಿಷಯಗಳ ಉಲ್ಲೇಖಗಳಿವೆ.
- ವೇದಾಂಗ ಜ್ಯೋತಿಷದ ೧೦೦೦ ವರ್ಷಗಳ ಕಾಲ ನಮಗೆ ಯಾವ ಗ್ರಂಥಗಳೂ ಲಭ್ಯವಿಲ್ಲ.ನಂತರ ಕ್ರಿ ಪೂ ೩೦೦ ರಲ್ಲಿ ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಜ್ಯೋತಿಷದ ಬಗ್ಗೆ ಮಾಹಿತಿಗಳು ಇದ್ದವು.
- ನಂತರ ಕ್ರಿ ಶಕ ೪೯೯ ರ ಹೊತ್ತಿನಲ್ಲಿ ಆಚಾರ್ಯ ಆರ್ಯಭಟರ “ಆರ್ಯಭಟ್ಟೀಯ ಸಿದ್ಧಾಂತ ” ಪ್ರಕಟವಾಯಿತು. ಆಚಾರ್ಯ ಆರ್ಯಭಟರ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಇವರು ಗಣಿತಜ್ಞ ಮತ್ತು ಖಗೋಳ ಶಾಸ್ತ್ರಜ್ಞರಾಗಿದ್ದರು.
- “ಆರ್ಯಭಟ್ಟೀಯ ಸಿದ್ಧಾಂತ “ದಲ್ಲಿ ರಾಶಿ ಚಕ್ರ ಚಿಹ್ನೆಗಳ ಬಗ್ಗೆ ಗ್ರಹಣ ಆಕಾಶ ಭೂಮಿಯ ಆಕಾರ ಮುಂತಾದ ವಿಷಯಗಳ ಬಗ್ಗೆ ಬರೆದಿದ್ದಾರೆ. ಇವರ ಈ ಕೃತಿಗಳಲ್ಲಿ ಅಂಕಗಣಿತ ಬೀಜಗಣಿತ ತ್ರಿಕೋನಮಿತಿ ಗೋಲಾಕಾರ ಮುಂತಾದ ಗಣಿತಕ್ಕೆ ಸಂಬಂಧಿಸಿದ ವಿವರಗಳನ್ನು ಬರೆದಿದ್ದಾರೆ.
- ಇವರ ನಂತರ ಕ್ರಿ ಶಕ 550 ರಲ್ಲಿ ಆಚಾರ್ಯ ವರಾಹಮಿಹಿರರು ಬಹಳ ಅದ್ಭುತ ಗ್ರಂಥಗಳನ್ನು ರಚಿಸಿದ್ದಾರೆ.
- ಇವರಲ್ಲದೇ ಭಾರದ್ವಾಜ, ಯಾಜ್ಞವಲ್ಕ್ಯ, ಮಾಂಡವ್ಯ ಮಾರ್ಕಾಂಡೇಯ ಋಷಿಗಳೂ ಗ್ರಂಥಗಳನ್ನು ರಚಿಸಿದ್ದಾರೆ. ಇವರುಗಳ ನಂತರ ಶ್ರೀಪತಿ, ಕೇಶವ, ಕಲ್ಯಾಣವರ್ಮ, ಭಾಸ್ಕರ ವೈದ್ಯನಾಥ ಮಂತ್ರೇಶ್ವರ ಇತರ ಹಲವರು ತಮ್ಮ ಸ್ವತಂತ್ರ ಫಲ ಹಾಗು ಸಿದ್ಧಾಂತಗಳನ್ನು ರಚಿಸಿದರು.
