ನಕ್ಷತ್ರಗಳು
ನಕ್ಷತ್ರಗಳು ರಾಶಿ ಚಕ್ರಗಳ ಉಪವಿಭಾಗಗಳಾಗಿವೆ. ಈ ನಕ್ಷತ್ರಗಳು ಮೇಷ ರಾಶಿಯಲ್ಲಿ ಶೂನ್ಯದಿಂದ ಪ್ರಾರಂಭವಾಗಿ ಮೀನ ರಾಶಿಯಲ್ಲಿ ಅಂತ್ಯಗೊಳ್ಳುತ್ತವೆ. ಒಟ್ಟು 360 ಡಿಗ್ರಿಗಳನ್ನು ಹೊಂದಿರುತ್ತವೆ. ಅದರಲ್ಲಿ 27 ಭಾಗ ಮಾಡಿದರೆ 27 ನಕ್ಷತ್ರಗಳ ಸ್ಥಾನಗಳು ಆಗುತ್ತವೆ. ಪ್ರತಿಯೊಂದು ನಕ್ಷತ್ರವು ಭಚಕ್ರದ 13°20’ ಆವರಿಸಿದೆ. ಪ್ರತಿಯೊಂದು ನಕ್ಷತ್ರವು ೪ ಭಾಗಗಳಲ್ಲಿ 3°20’ ಯಂತೆ ವಿಂಗಡಿಸಲಾಗಿದೆ. ಈ ಭಾಗಕ್ಕೆ ಪಾದ ಅಥವಾ ಚರಣ ಎಂತಲೂ ಕರೆಯುತ್ತಾರೆ. 27 ನಕ್ಷತ್ರಗಳ ಎಲ್ಲ ಪಾದಗಳೂ ಸೇರಿದರೆ ಒಟ್ಟು 108 ಪಾದಗಳು ಆಗುತ್ತವೆ.
ಚಂದ್ರನು ಅಂದಾಜು ಪ್ರತಿದಿನ ಒಂದು ನಕ್ಷತ್ರದಂತೆ ಒಂದು ತಿಂಗಳಲ್ಲಿ ಈ 27 ನಕ್ಷತ್ರಗಳಲ್ಲಿ ಸಂಚರಿಸುತ್ತಾನೆ. ಯಾವುದೇ ವ್ಯಕ್ತಿಯ ಜನ್ಮ ಕಾಲದಲ್ಲಿ ಚಂದ್ರನು ಯಾವ ನಕ್ಷತ್ರದಲ್ಲಿರುತ್ತಾನೋ ಅದು ಅವರ ನಕ್ಷತ್ರವಾಗುತ್ತದೆ. ಯಾವ ವ್ಯಕ್ತಿಯ ಜನ್ಮ ಕಾಲದಲ್ಲಿ ಚಂದ್ರನು ಯಾವ ರಾಶಿಯಲ್ಲಿರುತ್ತಾನೋ ಅದು ಅವರ ಜನ್ಮ ರಾಶಿಯೆಂದು ಪರಿಗಣಿಸುತ್ತಾರೆ. ಈ ಸಂಚಿಕೆಯಲ್ಲಿ ನಾವು ಅಶ್ವಿನಿ ನಕ್ಷತ್ರದ ಬಗ್ಗೆ ತಿಳಿಯೋಣ.
ಅಶ್ವಿನಿ ನಕ್ಷತ್ರವು ರಾಶಿ ಚಕ್ರದಲ್ಲಿ ಬರುವ 27 ನಕ್ಷತ್ರಗಳಲ್ಲಿ ಮೊದಲನೆಯದು. ಇದು ದೇವ ಗಣ ನಕ್ಷತ್ರ. ಇದರ ನಾಲ್ಕೂ ಪಾದಗಳು (ಚರಣ) ಮೇಷ ರಾಶಿಯಲ್ಲಿ ಬರುತ್ತವೆ. ಈ ನಕ್ಷತ್ರಕ್ಕೆ ಕೇತು ಗ್ರಹವು ಅಧಿಪತಿ.
ಸೂಚನೆ: ಈ ಕೆಳಗೆ ಕೊಟ್ಟಿರುವ ನಕ್ಷತ್ರ ವಿವರಗಳು ಸಾಮಾನ್ಯವಾಗಿವೆ. ಹೆಚ್ಚಿನ ಸೂಕ್ಷ್ಮ ವಿವರಗಳನ್ನು ವಿದ್ಯಾವಂತ ಜ್ಯೊತಿಷಿಗಳ ಸಹಾಯದಿಂದ ತಿಳಿಯಬಹುದು.
ದಕ್ಷಿಣ ಭಾರತದಲ್ಲಿ ಸ್ಥಿರ ಅಥವಾ ನಿರಯನ ಕುಂಡಲಿಯಲ್ಲಿ ಮೇಷ ರಾಶಿ ಜಾತಕ (ಕುಂಡಲಿ) ಈ ರೀತಿಯಾಗಿ ಕಾಣುತ್ತದೆ.

ಉತ್ತರ ಭಾರತೀಯ ಶೈಲಿಯ ಜಾತಕ ಅಥವಾ ಕುಂಡಲಿಯಲ್ಲಿ ಮೇಷ ರಾಶಿ ಜಾತಕ ಈ ರೀತಿಯಾಗಿ ಕಾಣುತ್ತದೆ.

ಅಶ್ವಿನಿ ನಕ್ಷತ್ರದಲ್ಲಿ ಜನಿಸಿದ ಪುರುಷರ ಸಾಮಾನ್ಯ ಲಕ್ಷಣಗಳು :
ಇವರು ಧೈರ್ಯವಂತರು, ಉತ್ತಮವಾದ ಗ್ರಹಿಕೆಯುಳ್ಳವರು ಮತ್ತು ಉತ್ತಮ ನೇತೃತ್ವ ವಹಿಸುವವರು ಆಗಿರುತ್ತಾರೆ. ಇವರು ಲಕ್ಷಣವಾದ ಮುಖ, ಹೊಳೆಯುವ ಕಣ್ಣುಗಳು ಮತ್ತು ಅಗಲವಾದ ಹಣೆಯನ್ನು ಹೊಂದಿರುತ್ತಾರೆ. ಇವರು ಇತರರಿಗೆ ಬಹಳ ಶಾಂತ ಮತ್ತು ಮೌನಿಯಂತೆ ಕಂಡರೂ ಸಹ ಯವುದೇ ಕೆಲಸವನ್ನು ಮಾಡಿಸಿಕೊಳ್ಳುವ ಮತ್ತು ಮಾಡುವ ಸಾಮರ್ಥ್ಯ ಹೊಂದಿರುತ್ತಾರೆ.
ಇವರು ಎಲ್ಲರೊಡನೆ ಉತ್ತಮ ಸಂಬಂಧ ನಿಭಾಯಿಸಲು ಪ್ರಯತ್ನಿಸುತ್ತಾರೆ. ಇವರು ತಮ್ಮನ್ನು ಪ್ರೀತಿಸುವ ಮತ್ತು ಗೌರವಿಸುವ ವ್ಯಕ್ತಿಗಳೊಂದಿಗೆ ಬಹಳ ನಿಷ್ಥೆಯಿಂದ ಇರುತ್ತಾರೆ. ಅವರಿಗಾಗಿ ಯಾವುದೇ ತ್ಯಾಗಕ್ಕೆ ಸಿದ್ಧರಿರುತ್ತಾರೆ. ಆದಷ್ಟು ತಾಳ್ಮೆಯಿಂದ ಇರುತ್ತಾರೆ. ಆದರೆ ಇವರಿಗೆ ಕೋಪ ಬಂದರೆ ಮಾತ್ರ ಶಾಂತಗೊಳ್ಳಲು ಹೆಣಗಾಡುತ್ತಾರೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಾರೆ. ಇವರು ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರೆ ನಿಧಾನವಾಗಿ ತಮ್ಮದೇ ಆದ ವಿಭಿನ್ನ ರೀತಿಯಲ್ಲಿ ಸರಿಯಾಗಿ ಮಾಡುತ್ತಾರೆ.
ಇವರು ಸರಳವಾಗಿ ಯವುದೇ ಪ್ರಭಾವಕ್ಕೆ ಒಳಾಗಾಗುವುದಿಲ್ಲ. ತಮ್ಮ ಮಾತಿಗೆ ಎಂದೂ ತಪ್ಪುವುದಿಲ್ಲ. ಯಾವುದೇ ವಿಷಯದಲ್ಲಿ ವಿಚಾರಿಸದೇ ಹಠಾತ್ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಇವರು ದೇವರನ್ನು ನಂಬುತ್ತಾರೆ. ಆದರೆ ಧಾರ್ಮಿಕ ಮತ್ತು ಭಾವನಾತ್ಮಕ ವಿಚಾರಗಳಿಗೆ ಸ್ಪಂದಿಸುವುದಿಲ್ಲ. ಇವರು ವಿಭಿನ್ನ ಮಾದರಿಯ ಸಂಪ್ರದಾಯವಾದಿಗಳು.
ಇವರು ಸಾಕಷ್ಟು ವಿದ್ಯೆಗಳಲ್ಲಿ ಪಾಂಡಿತ್ಯ ಹೊಂದಿರುತ್ತಾರೆ. ಇವರ ಜೀವನದ ಮೊದಲ ಕೆಲವು ವರ್ಷಗಳು ಶ್ರಮದಾಯಕ ಮತ್ತು ಕಷ್ಟದಾಯಕವಾಗಿರುತ್ತದೆ. ನಂತರದಲ್ಲಿ ಸ್ಥಿರವಾಗಿ ನೆಲೆಯೂರುತ್ತಾರೆ. ಇವರ ಆದಾಯಕ್ಕಿಂತ ಖರ್ಚು ಹೆಚ್ಚಾಗಿರುತ್ತದೆ. ಕೌಟುಂಬಿಕ ಜೀವನ ಚೆನ್ನಾಗಿರುತ್ತದೆ. ಇವರ ಹಠಮಾರಿತನದ ಸ್ವಭಾವಕ್ಕೆ ಕುಟುಂಬದಲ್ಲಿ ಬೇಸರವಿರುತ್ತದೆ. ಇವರಿಗೆ ಬಹಳ ಹಠ ಇರುತ್ತದೆ ಮತ್ತು ನೇರ ಮಾತುಗಳನ್ನು ಆಡುತ್ತಾರೆ. ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳದೇ ಪದೇ ಪದೇ ಅದೇ ತಪ್ಪುಗಳನ್ನು ಮಾಡುತ್ತಾರೆ.
ಇವರು ಸಾಮಾನ್ಯವಾಗಿ ಉತ್ತಮ ಆರೋಗ್ಯ ಹೊಂದಿರುತ್ತಾರೆ. ಮಧ್ಯ ವಯಸ್ಸಿನ ನಂತರದಲ್ಲಿ ಎಲುಬುಗಳ, ಜೀರ್ಣಕ್ರಿಯೆಯಲ್ಲಿ ಮತ್ತು ಎದೆ ಭಾಗದಲ್ಲಿ ತೊಂದರೆಗಳು ಕಾಣಿಸಿಕೊಳ್ಳಬಹುದು. ಜಾಗ್ರತೆ ವಹಿಸಿ.
ಅಶ್ವಿನಿ ನಕ್ಷತ್ರದಲ್ಲಿ ಜನಿಸಿದ ಮಹಿಳೆಯರ ಸಾಮಾನ್ಯ ಲಕ್ಷಣಗಳು :
ಇವರು ಲಕ್ಷಣವಾಗಿದ್ದು ಹೊಳೆಯುವ ಕಣ್ಣುಗಳನ್ನು ಹೊಂದಿರುತ್ತಾರೆ. ನಿರರ್ಗಳವಾಗಿ ಮಾತನಾಡಬಲ್ಲರು. ಇವರು ಬಹಳ ಚತುರತೆಯಿಂದ ಕಾರ್ಯ ನಿಭಾಯಿಸಬಲ್ಲರು. ಬಹಳ ತಾಳ್ಮೆಯಿಂದ ಇರುತ್ತಾರೆ. ಯಾವುದೇ ಕೆಲಸವನ್ನು ನಿಷ್ಠೆಯಿಂದ ನಿಭಾಯಿಸಬಲ್ಲರು. ಇವರು ಬಹಳ ಅಧುನಿಕ ರೀತಿಯಲ್ಲಿ ಜೀವನ ನಡೆಸಿದರೂ ಸಹ ಸಂಪ್ರದಾಯಗಳನ್ನು ಗೌರವಿಸುತ್ತಾರೆ. ಗುರು ಹಿರಿಯರನ್ನು ಆದರಿಸುತ್ತಾರೆ.
ಸಮಾಜಿಕ ಕಾರ್ಯಗಳಲ್ಲಿ ಆಸಕ್ತಿ ತೋರಿಸುತ್ತಾರೆ. ತಮ್ಮ ಕುಟುಂಬವನ್ನು ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ಉತ್ತಮ ಕೌಟುಂಬಿಕ ಮತ್ತು ವೈವಾಹಿಕ ಜೀವನ ನಡೆಸಲು ಪ್ರಯತ್ನಿಸುತ್ತಾರೆ. ಕುಟುಂಬದಲ್ಲಿ ಕೆಲವೊಮ್ಮೆ ಕಲಹಗಳು ಆಗುತ್ತವೆ. ಆದಷ್ಟು ಮಾನಸಿಕ ತೊಳಲಾಟಗಳಿಂದ ದೂರವಿರಿ.
ಬೆಂಕಿಯ ವಿಷಯದಲ್ಲಿ ಅಂದರೆ ಅಡುಗೆ ಮಾಡುವಾಗ ಜಾಗ್ರತೆಯಾಗಿರಿ. ವಾಹನ ಚಲಿಸುವಾಗ ಕಾಳಜಿಯಿಂದ ಇರಿ. ಕೆಲಸದಲ್ಲಿ ಒತ್ತಡ ಹೆಚ್ಚಾಗಬಹುದು. ಸಾಮಾನ್ಯವಾಗಿ ಉತ್ತಮ ಆರೋಗ್ಯ ಹೊಂದಿರುತ್ತಾರೆ. ಇವರಿಗೆ ಮುಖ್ಯವಾದ ಸಮಸ್ಯೆ ಎಂದರೆ ಭಾವನಾತ್ಮಕ ಒತ್ತಡ. ಆದಷ್ಟು ಶಾಂತವಾಗಿರಿ ಮತ್ತು ನಿಯಮಿತ ಆಹಾರ ಮತ್ತು ವಿಶ್ರಾಂತಿ ತೆಗೆದುಕೊಳ್ಳಿ.
(ಆಧಾರ: ಜ್ಯೋತಿಷ ಸಾರ ತಿಲಕ )
