
ಹಿಂದಿನ ಸಂಚಿಕೆಯಲ್ಲಿ ಕರ್ಕಾಟಕ ಲಗ್ನದ ಗುಣ ಲಕ್ಷಣಗಳ ಬಗ್ಗೆ ತಿಳಿದಿದ್ದೆವು. ಇವತ್ತಿನ ಸಂಚಿಕೆಯಲ್ಲಿ ಸಿಂಹ ಲಗ್ನದ ಬಗ್ಗೆ ತಿಳಿಯೋಣ. ಇದು ರಾಶಿ ಚಕ್ರದಲ್ಲಿ ಬರುವ ಐದನೆಯ ಮನೆ. ಇದು ಸ್ಥಿರ ಲಗ್ನ.
ಈ ಲಗ್ನಕ್ಕೆ ರವಿ ಅಧಿಪತಿ. ಪ್ರತೀ ವರ್ಷ ಸೂರ್ಯನು ನಿರಯನ ಪದ್ದತಿಯ ಪ್ರಕಾರ ಅಂದಾಜು ೧೪ ಆಗಸ್ಟ ಇಂದ ೧೪ ಸೆಪ್ಟೆಂಬರ್ ತಿಂಗಳವರೆಗೆ ಈ ಲಗ್ನದಲ್ಲಿ ಚಲಿಸುತ್ತಾನೆ.
ಸೂಚನೆ: ಈ ಕೆಳಗೆ ಕೊಟ್ಟಿರುವ ಲಗ್ನ ವಿವರಗಳು ಸಾಮಾನ್ಯವಾಗಿವೆ. ಹೆಚ್ಚಿನ ಸೂಕ್ಷ್ಮ ವಿವರಗಳನ್ನು ವಿದ್ಯಾವಂತ ಜ್ಯೊತಿಷಿಗಳ ಸಹಾಯದಿಂದ ತಿಳಿಯಬಹುದು.
ದಕ್ಷಿಣ ಭಾರತದಲ್ಲಿ ಸ್ಥಿರ ಅಥವಾ ನಿರಯನ ಕುಂಡಲಿಯಲ್ಲಿ ಸಿಂಹ ಲಗ್ನದ ಜಾತಕ (ಕುಂಡಲಿ) ಈ ರೀತಿಯಾಗಿ ಕಾಣುತ್ತದೆ.

ಉತ್ತರ ಭಾರತೀಯ ಶೈಲಿಯ ಜಾತಕ ಅಥವಾ ಕುಂಡಲಿಯಲ್ಲಿ ಸಿಂಹ ಲಗ್ನದ ಜಾತಕ ಈ ರೀತಿಯಾಗಿ ಕಾಣುತ್ತದೆ.

ಸಾಮಾನ್ಯ ಫಲಗಳು: ಸಿಂಹ ಲಗ್ನದಲ್ಲಿ ಜನಿಸಿದವರು ಸಾಮಾನ್ಯವಾಗಿ ಅಗಲ ಭುಜಗಳನ್ನು ಹೊಂದಿದ್ದು, ಆರೋಗ್ಯಯುತವಾದ ಕೆಂಪು ಬಣ್ಣದವರಿರುತ್ತಾರೆ. ಮಧ್ಯಮ ಎತ್ತರವಿದ್ದು ಅಗಲವಾದ ಮೂಳೆಗಳು ಮತ್ತು ಸ್ನಾಯುಗಳನ್ನು ಹೊಂದಿರುತ್ತಾರೆ. ಇವರು ಸ್ನೇಹಜೀವಿ, ತಿಳುವಳಿಕೆ ಉಳ್ಳವರು ಮತ್ತು ಎಲ್ಲರಿಂದ ಗೌರವಿಸಲ್ಪಡುತ್ತಾರೆ. ಬಹಳ ದೊಡ್ಡ ಸಂಬಂಧಿಗಳ ಮತ್ತು ಸ್ನೇಹಿತರ ಬಳಗ ಹೊಂದಿರುತ್ತಾರೆ. ಇವರು ಬಹಳ ಮಹತ್ವಾಕಾಂಕ್ಷಿಯಾಗಿದ್ದು ಉದಾರಗುಣ, ಬಲವಾದ ಆತ್ಮವಿಶ್ವಾಸ ಹೊಂದಿದ್ದು ಯಾವುದೇ ರೀತಿಯ ಭಯ ಇಲ್ಲದ ವ್ಯಕ್ತಿತ್ವ ಹೊಂದಿರುತ್ತಾರೆ. ಕಲೆಗಳನ್ನು ಬಹಳ ಇಷ್ಟಪಡುವರು. ಯಾವಾಗಲೂ ಹರ್ಷಚಿತ್ತರಾಗಿದ್ದು ಜೀವನದ ಕ್ಷಣಗಳನ್ನು ಅನುಭವಿಸುತ್ತಾರೆ.
ಇವರು ಉದಾತ್ತ, ನೇರ ಮತ್ತು ಬಹಿರಂಗವಾಗಿ ಭಾವನೆಗಳನ್ನು ಹಂಚಿಕೊಳ್ಳುತ್ತಾರೆ. ಬಲವಾದ ಇಚ್ಛಾಶಕ್ತಿ ಉಳ್ಳವರು ಮತ್ತು ಸ್ವತಂತ್ರ ಮನೋಭಾವ ಹೊಂದಿರುತ್ತಾರೆ. ಬೇರೆಯವರಿಗೆ ಇವರು ಪ್ರೇರಣಾ ದಾಯಕವಾಗಿರುತ್ತಾರೆ. ಇವರು ಯಾವುದೇ ಕ್ಷಣದಲ್ಲಿ ಮತ್ತೊಬ್ಬರ ಸಹಾಯಕ್ಕೆ ಸಿದ್ಧರಿರುತ್ತಾರೆ. ಉತ್ತಮ ನಿರ್ಧಾರ ತೆಗೆದುಕೊಳ್ಳುತ್ತಾರೆ. ಬೇರೆಯವರ ತಪ್ಪುಗಳನ್ನು ಕ್ಷಮಿಸಿ ಮುನ್ನಡೆಯುವ ಸ್ವಭಾವ ಇವರದಾಗಿರುತ್ತದೆ. ಇವರು ಇತರರಿಗಿಂತ ಸ್ವತಂತ್ರವಾಗಿ, ಭಿನ್ನವಾಗಿ, ಕಲಾತ್ಮಕವಾಗಿ ಯೋಚಿಸುವದರಿಂದ ಯವುದೇ ಕೆಲಸವನ್ನು ಅಚ್ಚುಕಟ್ಟಾಗಿ ಅತ್ತ್ಯುತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತಾರೆ. ಇವರ ಜೀವನದಲ್ಲಿ ಅನೇಕ ಕಾರ್ಯಗಳನ್ನು ಮುಂದಾಳತ್ವ ವಹಿಸಿ ನಡೆಸಿಕೊಡುತ್ತಾರೆ.
ಇವರು ಹೊಗಳಿಕೆಗಳನ್ನು ಆನಂದಿಸುತ್ತಾರೆ. ಆದರೆ ಅದರಿಂದ ಗರ್ವ ಪಡುವ ವ್ಯಕ್ತಿ ಅಲ್ಲ. ಯವುದೇ ಕೆಲಸವನ್ನು ಕೊನೆಯ ಕ್ಷಣದವರೆಗೂ ಪ್ರಯತ್ನ ಪಟ್ಟು ಸಾಧಿಸಲು ಯತ್ನಿಸುತ್ತಾರೆ. ದಿನನಿತ್ಯದ ಕೆಲಸಗಳಲ್ಲಿಯೂ ಸಹ ಚತುರ ಮತ್ತು ರಚನಾತ್ಮಕ ಕ್ರಮಗಳನ್ನು ಪಾಲಿಸಲು ಪ್ರಯತ್ನಿಸುತ್ತಾರೆ. ಇವರು ಉತ್ತಮ ಯೋಜನಾಕಾರರು, ಮುಂದಾಳತ್ವ ವಹಿಸುವವರು, ಚೈತನ್ಯ ಮತ್ತು ಹುರುಪಿನಿಂದ ಇರುತ್ತಾರೆ. ಧೈರ್ಯಶಾಲಿಯಾಗಿದ್ದು ಎಲ್ಲರಿಗೂ ಸಹಾಯ ಮಾಡುತ್ತಾರೆ. ಆದಷ್ಟು ಎಲ್ಲರ ಜೊತೆಗೆ ಒಳ್ಳೆಯ ಸಂಬಂಧ ಉಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ.
ಆರೋಗ್ಯ: ಸಿಂಹ ಲಗ್ನದಲ್ಲಿ ಜನಿಸಿದವರು ಉತ್ತಮ ಆರೋಗ್ಯ ಹೊಂದಿರುತ್ತಾರೆ. ಸಾಮಾನ್ಯವಾಗಿ ಪಿತ್ತ ಮತ್ತು ವಾತ ಸಂಬಂಧ ಖಾಯಿಲೆ ಇವರನ್ನು ಕಾಡುತ್ತದೆ. ವಯಸ್ಸಾದ ನಂತರ ಇವರಿಗೆ ಹೃದಯ ರೋಗ, ಬೆನ್ನು ಹುರಿ, ನರ ದೌರ್ಬಲ್ಯ ಮತ್ತು ಕರುಳಿನ ಸಮಸ್ಯೆಗಳು ಬಾಧಿಸಬಹುದು. ಹೃದಯದ ಬಡಿತದಲ್ಲಿ ಏರುಪೇರು, ಸಂಧಿವಾತ ಜ್ವರ, ತಲೆ ಸುತ್ತುವಿಕೆ ಮತ್ತು ಉರಿಯೂತ ಸಮಸ್ಯೆಗಳಿಂದ ಬಳಲುತ್ತಾರೆ. ಇವರು ಆದಷ್ಟು ಉತ್ತಮ ಸಮತೋಲಿತ ಆಹಾರ, ವ್ಯಾಯಾಮ ಮತ್ತು ನಿದ್ದೆ ಮಾಡುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಹಣಕಾಸು: ಸಿಂಹ ಲಗ್ನದಲ್ಲಿ ಜನಿಸಿದವರು ಸಾಮಾನ್ಯವಾಗಿ ಆರ್ಥಿಕ ವಿಷಯದಲ್ಲಿ ಸುದೈವಿಗಳು. ಜೀವನದ ಮೊದಲ ಘಟ್ಟದಲ್ಲಿ ಬಹಳವಾಗಿ ತೊಂದರೆಗಳನ್ನು ಅನುಭವಿಸಿರುತ್ತಾರೆ. ನಂತರದಲ್ಲಿ ಸಾಕಷ್ಟು ಸೌಲಭ್ಯ ಹೊಂದಿರುತ್ತಾರೆ. ಅನಾವಶ್ಯ ಖರ್ಚು ಮಾಡುತ್ತಾರೆ. ಕಷ್ಟದಲ್ಲಿ ಇರುವವರಿಗೆ ತಕ್ಷಣ ಹಣಕಾಸಿನ ಸಹಾಯ ಮಾಡುತ್ತಾರೆ.ಇವರು ನಂಬಿಕೆ ಮತ್ತು ವಿಶ್ವಾಸಾರ್ಹ ವ್ಯಕ್ತಿಯಾಗಿರುವದರಿಂದ ದೊಡ್ಡ ಕಾರ್ಯಕ್ರಮಗಳನ್ನು ನಿಭಾಯಿಸುವ ಸಂದರ್ಭ ಬರಬಹುದು. ಆಗ ಜಾಗ್ರತೆಯಿಂದ ಇರಬೇಕು. ಅಲಕ್ಷ್ಯದಿಂದ ಹಾನಿ ಆಗಬಹುದು. ಅನಾವಶ್ಯ ಖರ್ಚು ಕಡಿಮೆ ಮಾಡಿ ಮುಪ್ಪಿನ ಕಾಲಕ್ಕೆ ಹಣ ಶೇಖರಣೆ ಮಾಡುವುದು ಒಳ್ಳೆಯದು. ಉತ್ತಮ ಸಲಹೆ ಪಡೆದು ಉಳಿತಾಯ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಿ.
ಮುನ್ನೆಚ್ಚರಿಕೆ: ಸಿಂಹ ಲಗ್ನದವರು ಈ ಕೆಳಗಿನ ವಿಚಾರಗಳಲ್ಲಿ ಜಾಗ್ರತೆ ಯಾಗಿರಬೇಕು.
- ನೀವು ಆತುರದ ನಿರ್ಧಾರ ಮಾಡುವುದನ್ನು ಬಿಡಬೇಕು. ತಿಳಿದವರ ಹತ್ತಿರ ಮೊದಲು ಚರ್ಚೆ ಮಾಡಿ ನಂತರ ನಿರ್ಧಾರಕ್ಕೆ ಬನ್ನಿ.
- ಎಲ್ಲರೆದುರು ನಿಮ್ಮ ಎಲ್ಲ ವಿಷಯಗಳನ್ನು ಮತ್ತು ಅನಿಸಿಕೆಗಳನ್ನು ಬಹಿರಂಗವಾಗಿ ಚರ್ಚೆ ಮಾಡಬೇಡಿ. ಅದು ನಿಮಗೆ ತಿರುಗುಬಾಣವಾಗಿ ಕಷ್ಟವಾಗಬಹುದು.
- ನಿಮ್ಮ ವಿಚಾರ ಮತ್ತು ಆಸೆಗಳನ್ನು ಬೇರೆಯವರ ಮೇಲೆ ಹೇರಬೇಡಿ. ನಿಮ್ಮ ಆಕಾಂಕ್ಷೆಗಳನ್ನು ಹತೋಟಿಯಲ್ಲಿಡಿ ಮತ್ತು ವಿಚಾರಿಸಿ ನಿರ್ಧಾರಕ್ಕೆ ಬನ್ನಿ.
- ಅನಾವಶ್ಯ ಹಣ ಖರ್ಚು ಮಾಡುವುದನ್ನು ನಿಲ್ಲಿಸಿ ಮುಂಜಾಗ್ರತೆಯಾಗಿ ಹಣ ಕೂಡಿಡುವ ಕ್ರಮ ತೆಗೆದುಕೊಳ್ಳಿ.
- ಹಠಾತ್ ಮತ್ತು ತೀವ್ರತೆಯಿಂದ ಕಾರ್ಯ ಮಾಡುವುದನ್ನು ನಿಯಂತ್ರಣಕ್ಕೆ ತಂದುಕೊಳ್ಳಿ.
- ತಾಳ್ಮೆ ಮತ್ತು ಎಚ್ಚರಿಕೆಯಿಂದ ಇರಿ. ಬೇರೆಯವರ ವಿಚಾರಗಳಲ್ಲಿ ಮುಳುಗಬೇಡಿ.
- ಹೊಗಳಿಕೆಯಿಂದ ನಿಮ್ಮ ತತ್ವಗಳನ್ನು ಬಿಡಬೇಡಿ. ಯಾವಾಗಲೂ ನಿಮ್ಮದೇ ಆದ ವ್ಯಕ್ತಿತ್ವನ್ನು ಕಾಪಾಡಿಕೊಳ್ಳಿ.
- ಬೇರೆಯವರ ವಿಚಾರ ಮತ್ತು ಕಷ್ಟಗಳಿಂದ ಆದಷ್ಟು ಹೊರಗೆ ಬನ್ನಿ. ಇದರಿಂದ ನೀವು ನಿಮ್ಮ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮುಗಿಸಬಹುದು.
ಶುಭ ಸಂಖ್ಯೆಗಳು: 1, 4, 5, 6 ಮತ್ತು 9.
ಶುಭ ಬಣ್ಣಗಳು: ಕಿತ್ತಳೆ, ಕೆಂಪು ಮತ್ತು ಹಸಿರು ಬಣ್ಣಗಳು ಶುಭ.
ನೀಲಿ, ಬಿಳಿ ಮತ್ತು ಕಪ್ಪು ಬಣ್ಣಗಳು ಅಶುಭ.
ಶುಭ ವಾರಗಳು: ಭಾನುವಾರ, ಮಂಗಳವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರಗಳು ಶುಭ. ಶುಭ ರತ್ನಗಳು: ಮಾಣಿಕ್ಯ,ಕೆಂಪು ಹವಳ ಮತ್ತು ಹಳದಿ ಪುಷ್ಯರಾಗ ಹರಳುಗಳು ಶುಭ ಫಲಗಳನ್ನು ಕೊಡುತ್ತವೆ.
(ಆಧಾರ: ಜ್ಯೋತಿಷ ಸಾರ ತಿಲಕ ಮತ್ತು ಸರ್ವಾರ್ಥ ಚಿಂತಾಮಣಿ)
