ಹಿಂದಿನ ಸಂಚಿಕೆಯಲ್ಲಿ ನಾವು ಮಿಥುನ ಲಗ್ನದ ಗುಣ ಲಕ್ಷಣಗಳ ಬಗ್ಗೆ ತಿಳಿದಿದ್ದೆವು. ಇವತ್ತಿನ ಸಂಚಿಕೆಯಲ್ಲಿ ಕರ್ಕಾಟಕ ಲಗ್ನದ ಬಗ್ಗೆ ತಿಳಿಯೋಣ. ಇದು ರಾಶಿ ಚಕ್ರದಲ್ಲಿ ಬರುವ ನಾಲ್ಕನೆಯ ಮನೆ. ಇದು ಚರ ಲಗ್ನ. ಇದು ಉತ್ತರ ದಿಕ್ಕನ್ನು ಸೂಚಿಸುತ್ತದೆ.
ಚಂದ್ರನು ಈ ಲಗ್ನಕ್ಕೆ ಅಧಿಪತಿ. ಇಲ್ಲಿ ಗುರುನು (ಬಲಿಷ್ಟ) ಉಚ್ಚನಾಗಿರುವನು. ಮಂಗಳನು ಇಲ್ಲಿ ದುರ್ಬಲನು. ಪ್ರತೀ ವರ್ಷ ಸೂರ್ಯನು ನಿರಯನ ಪದ್ದತಿಯ ಪ್ರಕಾರ ಅಂದಾಜು ೧೪ ಜುಲೈ ಇಂದ ೧೪ ಆಗಸ್ಟ ತಿಂಗಳವರೆಗೆ ಈ ಲಗ್ನದಲ್ಲಿ ಚಲಿಸುತ್ತಾನೆ.
ಸೂಚನೆ: ಈ ಕೆಳಗೆ ಕೊಟ್ಟಿರುವ ಲಗ್ನ ವಿವರಗಳು ಸಾಮಾನ್ಯವಾಗಿವೆ. ಹೆಚ್ಚಿನ ಸೂಕ್ಷ್ಮ ವಿವರಗಳನ್ನು ವಿದ್ಯಾವಂತ ಜ್ಯೋತಿಷಿಗಳ ಸಹಾಯದಿಂದ ತಿಳಿಯಬಹುದು.
ದಕ್ಷಿಣ ಭಾರತದಲ್ಲಿ ಸ್ಥಿರ ಅಥವಾ ನಿರಯನ ಕುಂಡಲಿಯಲ್ಲಿ ಕರ್ಕಾಟಕ ಲಗ್ನದ ಜಾತಕ (ಕುಂಡಲಿ) ಈ ರೀತಿಯಾಗಿ ಕಾಣುತ್ತದೆ.

ಉತ್ತರ ಭಾರತೀಯ ಶೈಲಿಯ ಜಾತಕ ಅಥವಾ ಕುಂಡಲಿಯಲ್ಲಿ ಕರ್ಕಾಟಕ ಲಗ್ನದ ಜಾತಕ ಈ ರೀತಿಯಾಗಿ ಕಾಣುತ್ತದೆ.

ಸಾಮಾನ್ಯ ಫಲಗಳು: ಕರ್ಕ ಲಗ್ನದಲ್ಲಿ ಜನಿಸಿದವರು ಸಾಮಾನ್ಯವಾಗಿ ಎತ್ತರವಿರುತ್ತಾರೆ. ಧೃಢ ಧರೀರ, ದುಂಡನೆಯ ಮುಖ, ತುಂಬಿದ ಕೆನ್ನೆ ಮತ್ತು ಉದ್ದನೆಯ ಮೂಗು ಹೊಂದಿರುತ್ತಾರೆ. ಅಗಲ ಎದೆ, ಪಾದ ಮತ್ತು ಅಂಗೈ ಇರುತ್ತವೆ. ಒಳ್ಳೆಯ ಮೈಕಾಂತಿ ಹೊಂದಿರುತ್ತಾರೆ.
ಇವರು ಒಳ್ಳೆಯ ಮಾತುಗಾರರು ಮತ್ತು ಸಾರ್ವಜನಿಕರ ಮಧ್ಯೆ ಮಾತನಾಡುವ ಸಾಮರ್ಥ್ಯ ಉಳ್ಳವರಾಗಿರುತ್ತಾರೆ. ಜನರನ್ನು ತಮ್ಮ ಮಾತಿನಿಂದ ಮೋಡಿ ಮಾಡಬಲ್ಲರು. ಇವರು ಸೂಕ್ಷ್ಮ ಸ್ವಭಾವದವರಾಗಿದ್ದು ಉತ್ತಮ ಸ್ಥಿರತೆ, ಗ್ರಾಹಕ ಶಕ್ತಿ ಮತ್ತು ಉತ್ತಮ ಭಾವನೆಗಳನ್ನು ಹೊಂದಿರುತ್ತಾರೆ. ಉತ್ತಮ ಭಾವನಾತ್ಮಕ ಚಿಂತನೆಯುಳ್ಳವರು ಮತ್ತು ಒಳ್ಳೆಯ ಹಿತನುಡಿಗಳನ್ನಾಡುತ್ತಾರೆ. ಕೆಲವೊಮ್ಮೆ ತಮ್ಮ ಭಾವನೆಗಳಲ್ಲಿ ಕುರುಡಾಗುತ್ತಾರೆ. ಹಾಸ್ಯಾಸ್ಪದ ಮತ್ತು ಟೀಕೆಗಳು ಇವರನ್ನು ಮಾನಸಿಕವಾಗಿ ದುರ್ಬಲಗೊಳಿಸುತ್ತದೆ. ಇವರು ಸಾಂಪ್ರದಾಯಿಕ, ವಿವೇಚನಾಯುಕ್ತ ಮತ್ತು ಚಾತುರ್ಯ ಸ್ವಭಾವದವರಿರುತ್ತಾರೆ. ದೈಹಿಕ ಅಪಾಯಕ್ಕೆ ಅಂಜುತ್ತಾರೆ. ಆದರೆ ಮಾನಸಿಕವಾಗಿ ಮತ್ತು ನೈತಿಕವಾಗಿ ಬಹಳ ಬಲಿಷ್ಠರಿರುತ್ತಾರೆ. ಇವರಿಗೆ ಸಿಟ್ಟು ಬಹಳ ಬೇಗನೆ ಬಂದು ಹೋಗುತ್ತದೆ. ಇವರು ವಾತ್ಸಲ್ಯಮಯಿಗಳು, ನಿಷ್ಠಾವಂತರು, ಮೊಂಡು ಮತ್ತು ನಿರ್ಣಾಯಕ ವ್ಯಕ್ತಿತ್ವದವರು. ಇವರ ಜೀವನ ಬಹುಪಾಲು ಭಾವನೆ ಮತ್ತು ಕಲ್ಪನೆಗಳಿಂದ ಕೂಡಿರುತ್ತದೆ. ಜೀವನದ ನಂತರದ ಭಾಗದಲ್ಲಿ ಸುಖ ಜೀವನ ನಡೆಸುತ್ತಾರೆ. ಇವರು ಪ್ರವಾಸ ಪ್ರಿಯರು, ಬದಲಾವಣೆ ಮತ್ತು ಹೊಸ ಪ್ರಯೋಗಗಳನ್ನು ಮಾಡಲು ಸದಾ ಉತ್ಸುಕರಾಗಿರುತ್ತಾರೆ.
ಇವರು ತಮ್ಮ ಕುಟುಂಬಕ್ಕೆ ಮತ್ತು ಸಂಬಂಧಿಗಳಿಗೆ ಬಹಳ ಹತ್ತಿರದವರಾಗಿರುತ್ತಾರೆ. ಇವರಿಗೆ ಸಾರ್ವಜನಿಕರ ಜೀವನದ ಬಗ್ಗೆ ಒಲವು ಮತ್ತು ಸಹಾನುಭೂತಿ ಹೆಚ್ಚು. ಕೆಲವೊಮ್ಮೆ ಅತಿಯಾದ ಅಸಹನೆ ಇವರನ್ನು ಕಾಡುತ್ತದೆ. ಕರ್ಕ ಲಗ್ನದಲ್ಲಿ ಜನಿಸಿದವರು ತಮ್ಮ ಉದ್ಯೋಗದಲ್ಲಿ ಏರುಪೇರುಗಳನ್ನು ಕಾಣುತ್ತಾರೆ. ಇವರು ಉತ್ತಮ ಕಲ್ಪನೆಯುಳ್ಳವರು, ಧೃಢವಾದ ನೆನಪಿನ ಶಕ್ತಿಯುಳ್ಳವರು ಮತ್ತು ಶ್ರಮ ಜೀವಿಗಳು. ಇವರು ಉತ್ತಮ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ. ನಂಬಿಕೆಗೆ ಪೂರ್ಣ ಅರ್ಹರು. ಇವರ ವ್ಯಕ್ತಿತ್ವ ಆಕರ್ಷಕ ಮತ್ತು ಪ್ರಭಾವಶಾಲಿಯಾಗಿ ಇರುತ್ತದೆ. ತಮ್ಮ ಪರಿಶ್ರಮದಿಂದ ಉತ್ತಮ ಸಂಪತ್ತನ್ನು ಸಂಪಾದಿಸುತ್ತಾರೆ. ಇವರು ತಮ್ಮ ಜೀವನ ಸಂಗಾತಿಗಳಿಗೆ ಬಹಳ ಪ್ರೀತಿ, ನಿಷ್ಠೆ ಮತ್ತು ಜವಾಬ್ದಾರಿಯುತ ಜೀವನ ಕೊಡುತ್ತಾರೆ. ತಮ್ಮ ಮಕ್ಕಳಿಗೋಸ್ಕರ ಯಾವ ತ್ಯಾಗಕ್ಕೂ ಸಿದ್ಧರಿರುತ್ತಾರೆ. ಇವರು ಯಾವುದೇ ವಾತಾವರಣ ಮತ್ತು ಪರಿಸ್ಥಿತಿಗೆ ಹೊಂದಿಕೊಳ್ಳುತ್ತಾರೆ.
ಆರೋಗ್ಯ: ರಾಶಿ ಚಕ್ರದಲ್ಲಿ ಕರ್ಕಾಟಕವು ಎದೆಯ ಮತ್ತು ಹೊಟ್ಟೆಯ ಭಾಗವನ್ನು ಸೂಚಿಸುತ್ತದೆ. ಕರ್ಕ ಲಗ್ನದಲ್ಲಿ ಜನಿಸಿದವರು ಚಿಕ್ಕವರಿರುವಾಗ ಸೂಕ್ಷ್ಮ ಆರೋಗ್ಯ ಹೊಂದಿದ್ದರೂ ಸಹ ನಂತರ ಧೃಢ ಶರೀರ ಮತ್ತು ಆರೋಗ್ಯ ಹೊಂದುತ್ತಾರೆ. ಇವರಿಗೆ ಸಾಮಾನ್ಯವಾಗಿ ಪುಪ್ಪಸ, ಫ್ಲೂ, ಕೆಮ್ಮು, ಅಸ್ತಮಾ ಮತ್ತು ಅಜೀರ್ಣದಂತಹ ಸಮಸ್ಯೆಗಳು ಎದುರಾಗಬಹುದು.
ಎದೆಯ ಪಕ್ಕೆಗಳ ನೋವು, ಗಂಟಲು ಭಾಗದ ತೊಂದರೆ, ಅತಿಯಾದ ಆತಂಕ, ಪಿತ್ತರಸ ಹೆಚ್ಚಾಗುವಿಕೆ ಮತ್ತು ಜೀರ್ಣಾಂಗಗಳ ತೊಂದರೆ ಬರುವ ಸಾಧ್ಯತೆಗಳು ಇರುವುದರಿಂದ ಜಾಗ್ರತೆಯಾಗಿರಬೇಕು. ಸಮತೋಲನದ ಆಹಾರ, ವಿಶ್ರಾಂತಿ ಮತ್ತು ಸಮಾಧಾನಕರ ವಾತಾವರಣ ಸಹಾಯಕಾರಿಯಾಗುತ್ತವೆ.
ಹಣಕಾಸು: ಕರ್ಕ ಲಗ್ನದಲ್ಲಿ ಜನಿಸಿದವರು ಬಹಳ ಜಾಗ್ರತೆಯಿಂದ ಹಣ ಖರ್ಚು ಮಾಡುತ್ತಾರೆ. ಇವರಿಗೆ ಜೀವನದ ಮೊದಲ ಭಾಗದಲ್ಲಿ ಹಣಕಾಸಿನ ತೊಂದರೆಗಳು ಇರುತ್ತವೆ. ಮಧ್ಯವಯಸ್ಸಿನ ನಂತರ ಉತ್ತಮ ಹಣ ಸಂಪಾದನೆ ಮಾಡುತ್ತಾರೆ. ತಮ್ಮ ಪರಿಶ್ರಮದಿಂದ ಆಸ್ತಿ ಮತ್ತು ಹಣ ಶೇಖರಣೆ ಮಾಡುತ್ತಾರೆ. ಜಾಗ್ರತೆಯಿಂದ ಉತ್ತಮ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡುವುದು ಉತ್ತಮ.
ಮುನ್ನೆಚ್ಚರಿಕೆ: ಲಗ್ನದವರು ಈ ಕೆಳಗಿನ ವಿಚಾರಗಳಲ್ಲಿ ಜಾಗ್ರತೆಯಾಗಿರಬೇಕು.
೧) ಇವರು ಆದಷ್ಟು ತಾಳ್ಮೆ ಮತ್ತು ಸಹನೆಯಿಂದ ಇರುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಸೂಕ್ಷ್ಮ ದೃಷ್ಟಿಯಿಂದ ಕೂಲಂಕುಷವಾಗಿ ಎಲ್ಲವನ್ನೂ ಗಮನಿಸಬೇಕು. ಆಗ ದುಡುಕಿ ನಿರ್ಧಾರಕ್ಕೆ ಬರುವುದನ್ನು ತಪ್ಪಿಸಬಹುದು.
೨) ಬದಲಾವಣೆ ಮತ್ತು ಆಲಸ್ಯತನ ಇವರ ದುರ್ಬಲತೆ. ಇವುಗಳ ಮೇಲೆ ಹಿಡಿತ ಸಾಧಿಸುವ ಪ್ರಯತ್ನ ಮಾಡಬೇಕು. ಆದಷ್ಟು ಕಾರ್ಯ ಸಾಧನೆಗೆ ಬೇಕಾದ ಕ್ರಮ ಅನುಸರಿಸಿದರೆ ಉತ್ತಮ ಪ್ರಗತಿ ಕಾಣುವಿರಿ. ಕೀಳರಿಮೆ, ಅತೀ ಆತಂಕ ಮತ್ತು ನಿಷ್ಕ್ರಿಯತೆ ಒಳ್ಳೆಯದಲ್ಲ.
೩)ಇವರು ತಮ್ಮ ಪ್ರಕ್ಷುಬ್ಧ ಭಾವನೆಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು ಮತ್ತು ಆಧ್ಯಾತ್ಮದೆಡೆಗೆ ತಮ್ಮ ಆಸಕ್ತಿಗಳನ್ನು ಬೆಳೆಸಿಕೊಳ್ಳಬೇಕು.
೪) ಪ್ರತೀಕಾರ ಭಾವನೆ, ಹಿಂಜರಿಕೆ ಮತ್ತು ಅತೀ ಸೂಕ್ಷ್ಮ ಭಾವನೆಗಳನ್ನು ಹೋಗಲಾಡಿಸುವ ಪ್ರಯತ್ನ ಮಾಡಿದರೆ ಒಳ್ಳೆಯದು. ತಾಳ್ಮೆ ಮತ್ತು ಸಹಿಷ್ಣತೆಗಳನ್ನು ಹೆಚ್ಚು ಬೆಳೆಸಿಕೊಂಡಷ್ಟು ಉತ್ತಮ ಬೆಳವಣಿಗೆ ಆಗುವುದು.
೫) ಶಾಂತ ಕೇಳುಗರಾಗಿ. ಆಗ ದುಡುಕಿ ನಿರ್ಧಾರಕ್ಕೆ ಬರುವುದು ಮತ್ತು ಸಂಬಂಧಗಳು ಕೆಡದಂತೆ ಕಾಪಾಡಿಕೊಳ್ಳಬಹುದು.
ಶುಭ ಸಂಖ್ಯೆಗಳು: 4,6,8,2,7 ಮತ್ತು 9
ಶುಭ ಬಣ್ಣಗಳು: ಬಿಳಿ, ಕೆನೆ ಹಾಲಿನ ಬಣ್ಣ, ಕೆಂಪು, ಮತ್ತು ಹಳದಿ ಬಣ್ಣಗಳು ಶುಭ. ನೀಲಿ ಮತ್ತು ಹಸಿರು ಬಣ್ಣಗಳ ಬಳಕೆ ಮಾಡಬಾರದು.
ಶುಭ ವಾರಗಳು: ಸೋಮವಾರ, ಮಂಗಳವಾರ, ಗುರುವಾರ ಮತ್ತು ಶುಕ್ರವಾರಗಳು ಶುಭ ಫಲಗಳನ್ನು ಕೊಡುತ್ತವೆ.
ಶುಭ ರತ್ನಗಳು: ಬಿಳಿ ಮುತ್ತು, ಕೆಂಪು ಹವಳ ಮತ್ತು ಹಳದಿ ಪುಷ್ಯರಾಗ ಹರಳುಗಳು ಶುಭ ಫಲಗಳನ್ನು ಕೊಡುತ್ತವೆ.
(ಆಧಾರ: ಜ್ಯೋತಿಷ ಸಾರ ತಿಲಕ, ಸಾರಾವಳಿ)
