ಹಿಂದಿನ ಸಂಚಿಕೆಯಲ್ಲಿ ನಾವು ವೃಷಭ ಲಗ್ನದ ಗುಣ ಲಕ್ಷಣಗಳ ಬಗ್ಗೆ ತಿಳಿದಿದ್ದೆವು. ಇವತ್ತಿನ ಸಂಚಿಕೆಯಲ್ಲಿ ಮಿಥುನ ಲಗ್ನದ ಬಗ್ಗೆ ತಿಳಿಯೋಣ. ಇದು ರಾಶಿ ಚಕ್ರದಲ್ಲಿ ಬರುವ ಮೂರನೆಯ ಮನೆ. ಇದು ದ್ವಿಸ್ವಭಾವ ಲಗ್ನ.
ಬುಧನು ಈ ಲಗ್ನಕ್ಕೆ ಅಧಿಪತಿ. ಶನಿ ಮತ್ತು ಶುಕ್ರ ಗ್ರಹರು ಈ ಲಗ್ನದಲ್ಲಿ ಮಿತ್ರರು. ಪ್ರತೀ ವರ್ಷ ಸೂರ್ಯನು ನಿರಯನ ಪದ್ದತಿಯ ಪ್ರಕಾರ ಅಂದಾಜು ೧೪ ಜೂನ್ ಇಂದ ೧೪ ಜುಲೈ ತಿಂಗಳವರೆಗೆ ಈ ಲಗ್ನದಲ್ಲಿ ಚಲಿಸುತ್ತಾನೆ.
ಸೂಚನೆ: ಈ ಕೆಳಗೆ ಕೊಟ್ಟಿರುವ ಲಗ್ನ ವಿವರಗಳು ಸಾಮಾನ್ಯವಾಗಿವೆ. ಹೆಚ್ಚಿನ ಸೂಕ್ಷ್ಮ ವಿವರಗಳನ್ನು ವಿದ್ಯಾವಂತ ಜ್ಯೊತಿಷಿಗಳ ಸಹಾಯದಿಂದ ತಿಳಿಯಬಹುದು.
ದಕ್ಷಿಣ ಭಾರತದಲ್ಲಿ ಸ್ಥಿರ ಅಥವಾ ನಿರಯನ ಕುಂಡಲಿಯಲ್ಲಿ ಮಿಥುನ ಲಗ್ನದ ಜಾತಕ (ಕುಂಡಲಿ) ಈ ರೀತಿಯಾಗಿ ಕಾಣುತ್ತದೆ.

ಉತ್ತರ ಭಾರತೀಯ ಶೈಲಿಯ ಜಾತಕ ಅಥವಾ ಕುಂಡಲಿಯಲ್ಲಿ ಮಿಥುನ ಲಗ್ನದ ಜಾತಕ ಈ ರೀತಿಯಾಗಿ ಕಾಣುತ್ತದೆ.

ಸಾಮಾನ್ಯ ಫಲಗಳು: ಮಿಥುನ ಲಗ್ನದಲ್ಲಿ ಜನಿಸಿದವರು ಸಮಾನ್ಯವಾಗಿ ಮಧ್ಯಮ ಎತ್ತರವಾಗಿದ್ದು, ನೇರ ಮತ್ತು ತೆಳ್ಳನೆ ಶರೀರವನ್ನು ಹೊಂದಿರುತ್ತಾರೆ. ತೆಳುವಾದ ಕಾಲು, ಉದ್ದನೆಯ ಮುಖ, ಮೂಗು ಮತ್ತು ಗದ್ದವಿರುತ್ತದೆ. ಕಾಂತಿಯುಕ್ತ ಕಣ್ಣು ಮತ್ತು ಕಪ್ಪು ಕೂದಲನ್ನು ಹೊಂದಿರುತ್ತಾರೆ. ಇವರು ಬಹಳ ಚುರುಕಾಗಿ ಮತ್ತು ಸಕ್ರಿಯವಾಗಿ ಎಲ್ಲದರಲ್ಲಿ ಭಾಗವಹಿಸುತ್ತಾರೆ.
ಈ ಲಗ್ನದಲ್ಲಿ ಜನಿಸಿದವರು ಬುದ್ಧಿವಂತರಾಗಿದ್ದು ವಿದ್ಯಾಭ್ಯಾಸದಲ್ಲಿ ಆಸಕ್ತಿ ಹೊಂದಿರುತ್ತಾರೆ. ಸುಂದರವಾಗಿಯೂ, ಚತುರ ಮತ್ತು ನಾಚಿಕೆ ಸ್ವಭಾವದವರಿರುತ್ತಾರೆ. ಹೆಚ್ಚಾಗಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಕೆಲವೊಮ್ಮೆ ಗಾಬರಿ ಮತ್ತು ಚಡಪಡಿಕೆಯಿಂದ ಕೆಲಸದಲ್ಲಿ ಏಕಾಗ್ರತೆ ಕಳೆದುಕೊಳ್ಳುತ್ತಾರೆ. ಇವರು ಸಂಗೀತ, ನೃತ್ಯ, ಚಿತ್ರಕಲೆ ಮತ್ತು ಅವಿಷ್ಕಾರಗಳ ಬಗ್ಗೆ ಆಸಕ್ತಿ ಮತ್ತು ಅಭಿಮಾನ ಉಳ್ಳವರಾಗಿರುತ್ತಾರೆ.
ಈ ಲಗ್ನದಲ್ಲಿ ಜನಿಸಿದವರು ಪರಿಪೂರ್ಣತಾವಾದಿಗಳು. ಬೇರೆಯವರಿಗಿಂತ ಕೆಲಸಗಳನ್ನು ಉತ್ತಮ ರೀತಿಯಲ್ಲಿ ಮಾಡಬಲ್ಲವರಾಗಿರುತ್ತಾರೆ. ಯಾವುದೇ ಕಷ್ಟಕರ ಕೆಲಸವನ್ನು ಬಹಳ ಶ್ರದ್ಧೆ ಮತ್ತು ಸುಲಲಿತವಾಗಿ ಮಾಡುತ್ತಾರೆ. ಇವರಿಗೆ ಕಾತುರತೆ ಮತ್ತು ಕುತೂಹಲ ಸ್ವಭಾವ ಹೆಚ್ಚಾಗಿರುತ್ತದೆ. ಜೊತೆಗೆ ಮಹತ್ವಾಕಾಂಕ್ಷಿಗಳೂ ಆಗಿರುತ್ತಾರೆ. ಒಟ್ಟಿಗೇ ಎರಡು ಅಥವಾ ಮೂರು ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ತಮ್ಮ ಕೆಲಸದ ಬಗ್ಗೆ ಯವುದೇ ರೀತಿಯ ವಾದಗಳಿಗೆ ಸಿದ್ಧವಿರುತ್ತಾರೆ. ಕೆಲವೊಮ್ಮೆ ಬಹಳ ಆತಂಕ ಮತ್ತು ಅನಿಶ್ಚಿತತೆಯಿಂದ ಇರುತ್ತಾರೆ. ಇವರು ಒಳ್ಳೆಯ ಸಲಹೆಗಾರರು ಮತ್ತು ಯವುದೇ ರೀತಿಯ ತುರ್ತು ಪರಿಸ್ಥಿತಿಯಲ್ಲಿ ಸಹಾಯಕ್ಕೆ ಸಿದ್ಧರಿರುತ್ತಾರೆ. ಈ ಲಗ್ನದಲ್ಲಿ ಜನಿಸಿದವರು ಪ್ರಗತಿಶೀಲರು, ಉತ್ತಮ ಪತ್ತೇದಾರರು, ಬರಹಗಾರರು ಮತ್ತು ಒಳ್ಳೆಯ ಯೋಜನಾಕಾರರು. ಇವರು ಸತ್ಯ ಪ್ರಿಯರು ಮತ್ತು ಜೀವನವನ್ನು ಉತ್ತಮ ರೀತಿಯಲ್ಲಿ ಆನಂದಿಸುತ್ತಾರೆ. ಇವರು ಬಹಳ ಹೊಂದಾಣಿಕೆ ಸ್ವಭಾವದವರಾಗಿದ್ದು ಅತಿಥಿಗಳನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ.
ಆರೋಗ್ಯ: ಮಿಥುನ ಲಗ್ನದಲ್ಲಿ ಜನಿಸಿದವರು ಅನಾವಶ್ಯ ಚಿಂತೆ ಮತ್ತು ಆತಂಕಗಳಿಂದ ಅನಾರೋಗ್ಯವನ್ನು ಆಹ್ವಾನಿಸುತ್ತಾರೆ. ಆದ್ದರಿಂದ ಇವರು ಮಾನಸಿಕ ಉದ್ವೇಗ ಮತ್ತು ಅನಿಶ್ಚಿತತೆಗಳಿಂದ ದೂರವಿರಬೇಕು. ಒಟ್ಟಿಗೇ ಬಹಳ ಕೆಲಸ ಮುಗಿಸುವ ಆತುರದಲ್ಲಿ ಇರಬಾರದು. ಇದರಿಂದ ಕೆಲಸದ ಒತ್ತಡ ಹೆಚ್ಚಾಗಿ ಅನಾರೋಗ್ಯಕ್ಕೆ ಕಾರಣವಾಗಬಹುದು. ಉತ್ತಮ ನಿದ್ದೆ ಮತ್ತು ವಿಶ್ರಾಂತಿ ಕಡೆ ಗಮನ ಹರಿಸಬೇಕು. ಮಿಥುನವು ಪುಪ್ಪಸ, ಭುಜ ಮತ್ತು ಕೈಗಳನ್ನು ಸೂಚಿಸುತ್ತದೆ. ಈ ಲಗ್ನದಲ್ಲಿ ಜನಿಸಿದವರು ಈ ಭಾಗಗಳಲ್ಲಿ ಸಂಬಂಧಿಸಿದ ತೊಂದರೆಗಳು ಕಾಣಿಸಿಕೊಂಡರೆ ತಕ್ಷಣ ಚಿಕಿತ್ಸೆ ಮಾಡಬೇಕು.
ಹಣಕಾಸು: ಇವರ ಜೀವನದಲ್ಲಿ ಬಹಳ ಏರಿಳಿತಗಳು ಇರುತ್ತವೆ. ಹಣಕಾಸಿನ ವಿಷಯಗಳಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ತಮ್ಮದೇ ಆದ ಕೆಲವು ತಪ್ಪು ಮತ್ತು ತ್ವರಿತ ನಿರ್ಧಾರಗಳಿಂದ ಹಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು. ಸ್ಥಿರ ಆಸ್ತಿಗಳನ್ನು ಮಾಡುವಾಗ ಕಾಗದ ಪತ್ರಗಳ ವಿಚಾರದಲ್ಲಿ ಜಾಗ್ರತೆಯಿಂದ ಇರಬೇಕು. ಯಾವುದೇ ಗುಪ್ತ ವ್ಯವಹಾರಗಳಲ್ಲಿ ಹಣ ಹೂಡಿಕೆ ಮಾಡಬಾರದು.
ಮುನ್ನೆಚ್ಚರಿಕೆ: ಮಿಥುನ ಲಗ್ನದವರು ಈ ಕೆಳಗಿನ ವಿಚಾರಗಳಲ್ಲಿ ಜಾಗ್ರತೆಯಾಗಿರಬೇಕು.
1. ಇವರು ಬೇರೆಯವರ ಬಗ್ಗೆ ಕುತೂಹಲ ಮತ್ತು ತಪ್ಪನ್ನು ಹುಡುಕಬಾರದು. ಅವಸರದ ನಿರ್ಧಾರ ಒಳ್ಳೆಯದಲ್ಲ. ಇದರಿಂದ ಒಳ್ಳೆಯ ಸಂಬಂಧಗಳು ಹಾಳಾಗುತ್ತವೆ.
2. ಏಕಾಗ್ರತೆ ಕಳೆದುಕೊಂಡು ತ್ವರಿತ ನಿರ್ಧಾರಕ್ಕೆ ಬರುವುದನ್ನು ನಿಯಂತ್ರಣದಲ್ಲಿಡಬೇಕು. ಇದರಿಂದಾಗಿ ಬಹಳ ಅವಕಾಶಗಳು ತಪ್ಪಿ ಹೋಗುವ ಸಾಧ್ಯತೆಗಳು ಇವೆ.
3. ಚಿಕ್ಕ ಚಿಕ್ಕ ಕಲಹಗಳನ್ನು ಗಮನಿಸದೆ, ತಮ್ಮ ಕೆಲಸದಲ್ಲಿ ತಾಳ್ಮೆ ಮತ್ತು ಶ್ರದ್ಧೆ ಇಟ್ಟುಕೊಳ್ಳುವುದು ಬಹಳ ಅವಶ್ಯಕ. ಅವಸರ ಮತ್ತು ಆತಂಕ ಸ್ವಭಾವವನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು.
4. ಇವರಿಗೆ ಮಕ್ಕಳ ಬಗ್ಗೆ ಪ್ರೀತಿಯಿದ್ದರೂ ಸಹ, ಇವರು ಕೊಡುವ ಕಾಳಜಿ ಮತ್ತು ತೋರಿಸುವ ಪ್ರೀತಿಯಲ್ಲಿ ಬಹಳ ಸುಧಾರಣೆ ಮಾಡಿಕೊಳ್ಳಬೇಕು. ಆಗಲೇ ಮಕ್ಕಳು ಒಳ್ಳೆಯ ರೀತಿಯಲ್ಲಿ ಬೆಳೆಯಲು ಸಾಧ್ಯ.
5. ಅವಸರದಲ್ಲಿ ನೀವು ಬೇರೆಯವರಿಗೆ ಆತುರದ ಆಶ್ವಾಸನೆಗಳನ್ನು ನೀಡಬೇಡಿ. ಇದರಿಂದಾಗಿ ನೀವು ಸಂಕಷ್ಟಗಳಲ್ಲಿ ಸಿಕ್ಕಿಕೊಳ್ಳುವಿರಿ.
6.ಅತಿಯಾದ ಒತ್ತಡ ಮಾಡಿಕೊಳ್ಳಬೇಡಿ. ಇದರಿಂದ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದು.
ಮಿಥುನ ಲಗ್ನದವರಿಗೆ
ಶುಭ ಸಂಖ್ಯೆಗಳು: 7,3,5,6 ಮತ್ತು 9.
ಶುಭ ಬಣ್ಣಗಳು: ಹಳದೀ, ಜಾಂಬಳಿ, ನೀಲಿ, ಹಸಿರು ಮತ್ತು ಗುಲಾಬಿ ಶುಭ ಬಣ್ಣಗಳು.
ಕೆಂಪು ಮತ್ತು ಕಪ್ಪು ಬಣ್ಣ ಉಪಯೋಗಿಸಬಾರದು.
ಶುಭ ವಾರಗಳು: ಸೋಮವಾರ, ಗುರುವಾರ, ಬುಧವಾರ, ಮತ್ತು ಶುಕ್ರವಾರ
ಶುಭ ಫಲಗಳನ್ನು ಕೊಡುತ್ತವೆ.
ಶುಭ ರತ್ನಗಳು: ಪಚ್ಚೆ(Emerald) ಹರಳು ಶುಭ ಫಲಗಳನ್ನು ಕೊಡುತ್ತದೆ.
(ಆಧಾರ: ಜ್ಯೋತಿಷ ಸಾರ ತಿಲಕ, ಸಾರಾವಳಿ ಮತ್ತು ಸರ್ವಾರ್ಥ ಚಿಂತಾಮಣಿ)
