ವೃಷಭ ಲಗ್ನದ ಗುಣಲಕ್ಷಣಗಳು

ಹಿಂದಿನ ಸಂಚಿಕೆಯಲ್ಲಿ ನಾವು ಮೇಷ ಲಗ್ನದ ಗುಣ ಲಕ್ಷಣಗಳ ಬಗ್ಗೆ ತಿಳಿದಿದ್ದೆವು. ಇವತ್ತಿನ ಸಂಚಿಕೆಯಲ್ಲಿ ವೃಷಭ ಲಗ್ನದ ಬಗ್ಗೆ ತಿಳಿಯೋಣ.

ಇದು ರಾಶಿ ಚಕ್ರದಲ್ಲಿ ಬರುವ ಎರಡನೆಯ ಮನೆ. ಇದು ಸ್ಥಿರ ರಾಶಿ. ಶುಕ್ರನು ಈ ರಾಶಿಗೆ ಅಧಿಪತಿ ಮತ್ತು ಇಲ್ಲಿ ಚಂದ್ರನು (ಬಲಿಷ್ಟ) ಉಚ್ಚನಾಗಿರುವನು. ಪ್ರತೀ ವರ್ಷ ಸೂರ್ಯನು ನಿರಯನ ಪದ್ದತಿಯ ಪ್ರಕಾರ ಅಂದಾಜು  ೧೪ ಮೇ ಇಂದ ೧೪ ಜೂನ್ ತಿಂಗಳವರೆಗೆ ಚಲಿಸುತ್ತಾನೆ.

ಸೂಚನೆ: ಈ ಕೆಳಗೆ ಕೊಟ್ಟಿರುವ  ಲಗ್ನ ವಿವರಗಳು ಸಾಮಾನ್ಯವಾಗಿವೆಹೆಚ್ಚಿನ ಸೂಕ್ಷ್ಮ ವಿವರಗಳನ್ನು ವಿದ್ಯಾವಂತ ಜ್ಯೊತಿಷಿಗಳ ಸಹಾಯದಿಂದ ತಿಳಿಯಬಹುದು.

ದಕ್ಷಿಣ ಭಾರತದಲ್ಲಿ ಸ್ಥಿರ ಅಥವಾ ನಿರಯನ ಕುಂಡಲಿಯಲ್ಲಿ ವೃಷಭ ಲಗ್ನದ ಜಾತಕ (ಕುಂಡಲಿ) ಈ ರೀತಿಯಾಗಿ ಕಾಣುತ್ತದೆ.

ಉತ್ತರ  ಭಾರತೀಯ ಶೈಲಿಯ ಜಾತಕ ಅಥವಾ ಕುಂಡಲಿಯಲ್ಲಿ ವೃಷಭ ಲಗ್ನದ ಜಾತಕ ಈ ರೀತಿಯಾಗಿ ಕಾಣುತ್ತದೆ.

ವೃಷಭ ಲಗ್ನದಲ್ಲಿ ಜನಿಸಿದವರು ಸಾಮಾನ್ಯವಾಗಿ ಮಧ್ಯಮ ಎತ್ತರದವರಿದ್ದು, ಅಗಲ ಹಣೆ ಉಳ್ಳವರಾಗಿದ್ದು, ಹೊಳೆಯುವ ಕಣ್ಣುಗಳು, ದಪ್ಪ ಕುತ್ತಿಗೆ, ಕಪ್ಪು ಕೂದಲು, ಓಳ್ಳೆಯ ಮೈಬಣ್ಣ ಮತ್ತು ಗಟ್ಟಿ ಮುಟ್ಟಾದ ಶರೀರವನ್ನು ಹೊಂದಿರುತ್ತಾರೆ. ಮಹತ್ವಾಕಾಂಕ್ಷಿಗಳಾಗಿರುತ್ತಾರೆ.

ನಿಶ್ಚಲ ಮನಸ್ಸಿನವರು, ಸಂಪ್ರದಾಯವಾದಿ, ಪ್ರೀತಿ ಮತ್ತು ವಾತ್ಸಲ್ಯ ಪ್ರಿಯರು. ಆದರೆ ಕೋಪ ಬಂದಾಗ ನಿಯಂತ್ರಣ ಕಷ್ಟವಾಗುವುದು. ನಿಧಾನವಾಗಿಯಾದರೂ ಸಹ ಸ್ಥಿರ ಮತ್ತು ಗುಣಮಟ್ಟದ ಕೆಲಸ ಮಾಡುತ್ತಾರೆ.  

ಇವರು ಶ್ರಮ ಜೀವಿಗಳು ಮುಂಚಿತವಾಗಿ ಕೆಲಸ ಕಾರ್ಯಗಳನ್ನು ಯೋಜಿಸುತ್ತಾರೆ. ಅವರಿಗೆ ವಿರೋಧ ಬಂದಾಗ ಬಹಳ ಹಠಮಾರಿಗಳಾಗುತ್ತಾರೆ. ಸಾಮಾನ್ಯವಾಗಿ ಇವರುಗಳು ಮಿತಭಾಷಿಗಳು, ನಿಷ್ಠಾವಂತರು ಮತ್ತು ವಿಶ್ವಾಸಕ್ಕೆ ಅರ್ಹರು. ಇವರು  ಕಲೆ, ಸಾಹಿತ್ಯ, ನೈಸರ್ಗಿಕ ಸೌಂದರ್ಯ, ಸಂಗೀತ ಮತ್ತು ಸಾಹಿತ್ಯ ಪ್ರಿಯರು. ಇವರ ಸಹಾನುಭೂತಿಯ ಗುಣಕ್ಕೆ ಹತ್ತಿರದವರಿಂದ ಮೆಚ್ಚುಗೆ ಗಳಿಸುತ್ತಾರೆ. ಇವರು ಸಾಮರ್ಥ್ಯ ಶಾಲಿಗಳಾಗಿದ್ದು ಒಳ್ಳೆಯ ಕಾರ್ಯನಿರ್ವಾಹಕ ಹುದ್ದೆಯಲ್ಲಿ ಕೆಲಸ ಮಾಡಲು ಅರ್ಹರು. ಆರಾಮದಾಯಕ ಮತ್ತು ಆಹ್ಲಾದಕರ ಜೀವನ ನಡೆಸಲು ಬಯಸುತ್ತಾರೆ.

ಆರೋಗ್ಯ: ವೃಷಭ ಲಗ್ನದಲ್ಲಿ ಜನಿಸಿದವರು ದೃಢವಾದ ಮತ್ತು ಸ್ಥಿರವಾದ ದೇಹ ಹೊಂದಿದ್ದು ಉತ್ತಮ ಆರೋಗ್ಯ ಹೊಂದಿರುತ್ತಾರೆ. ಇವರು ಚಿಕ್ಕ ಚಿಕ್ಕ ಆರೋಗ್ಯದ ತೊಂದರೆಗಳಿಗೆ ಹೆದರುವುದಿಲ್ಲ. ಅತೀ ಸುಸ್ತಾಗುವವರೆಗೆ ಕೆಲಸ ಮಾಡುತ್ತಾರೆ. ಅನಾರೋಗ್ಯದಿಂದ ಮಲಗಿದರೆ ಗುಣಮುಖರಾಗಲು ಸಮಯ ತೆಗೆದುಕೊಳ್ಳುತ್ತಾರೆ.

ಇವರು ಸಾಮಾನ್ಯವಾಗಿ ಕುತ್ತಿಗೆ, ಗಂಟಲು,ಟಾನ್ಸಿಲ್ಸ್ (Tonsils), ಹಲ್ಲು ನೋವು, ದಂತ ಊತ ಮತ್ತು ಅಶಕ್ತತೆಯ ಸಮಸ್ಯೆಗಳನ್ನು ಎದುರಿಸಬಹುದು. ಕುತ್ತಿಗೆ ಭಾಗವನ್ನು ಜಾಗ್ರತೆಯಿಂದ ಕಾಪಾಡಿಕೊಳ್ಳಬೇಕು. ವಯಸ್ಸಾದವರು ಮಲಬದ್ಧತೆ ಮತ್ತು ಮೂಲ ವ್ಯಾಧಿಯಿಂದ ಬಳಲುವರು. ಇವರಿಗೆ ಅತಿಯಾದ ಹಸಿವು ಸಹ ಬಾಧಿಸಬಹುದು.

ಹಣಕಾಸು: ವೃಷಭ ಲಗ್ನದವರು ಸಾಮಾನ್ಯವಾಗಿ ದುಂದುವೆಚ್ಚ ಮಾಡದೇ ಹಣ ಉಳಿತಾಯ ಮಾಡುತ್ತಾರೆ. ಹಣ ಹೂಡಿಕೆ ಮಾಡುವಾಗ ಉತ್ತಮ ಸಲಹೆಗಳೊಂದಿಗೆ ಮುಂದುವರಿಯುವುದು ಉತ್ತಮ. ಕೆಲವರು ಜೂಜಿನ ಚಟಕ್ಕೆ ಬಿದ್ದು ಹಣ ಕಳೆದುಕೊಳ್ಳುವ ಸಂಭವವಿರುವುದು. ತಮ್ಮ ನಿಯಂತ್ರಣದಲ್ಲಿದ್ದರೆ ಹಣ ವ್ಯರ್ಥವಾಗುವುದನ್ನು ತಪ್ಪಿಸಬಹುದು.

ಮುನ್ನೆಚ್ಚರಿಕೆ: ವೃಷಭ ಲಗ್ನದವರು ಈ ಕೆಳಗಿನ ವಿಚಾರಗಳಲ್ಲಿ ಜಾಗ್ರತೆಯಾಗಿರಬೇಕು.

೧) ಉತ್ತಮ ಆರೋಗ್ಯಕ್ಕಾಗಿ ಮಿತ ಪೌಷ್ಟಿಕ ಆಹಾರ ಮತ್ತು ನಿಯಮಿತ ವ್ಯಾಯಾಮಗಳಿಂದ ಜೀವನ ನಡೆಸಬೇಕು.

೨) ಪ್ರತೀಕಾರ ಮತ್ತು ಹಠಮಾರಿ ಸ್ವಭಾವವನ್ನು ಬಿಡಬೇಕು.

೩) ತೀರಾ ನಿಧಾನವಾದ ಕೆಲಸ ಒಳ್ಳೆಯ ಪ್ರಗತಿ ಕೊಡುವುದಿಲ್ಲ. ಸಮಯಕ್ಕೆ ಸರಿಯಾಗಿ ಮುಂಜಾಗ್ರತೆಯಿಂದ ಕೆಲಸ ಮಾಡಿದರೆ ಉತ್ತಮ.

೪)ಕೋಪವನ್ನು ತುಂಬಾ ಹೊತ್ತು ಇಟ್ಟುಕೊಳ್ಳುವದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ.

೫) ದುಡುಕದೇ ತಾಳ್ಮೆಯಿಂದ ಯೋಚಿಸಿ ಹಣ ಹೂಡಿಕೆ ಮಾಡಬೇಕು.

ವೃಷಭ ಲಗ್ನದವರಿಗೆ

ಶುಭ ಸಂಖ್ಯೆಗಳು: 2, 8 7  ಮತ್ತು 9.

ಶುಭ ಬಣ್ಣಗಳು: ಗುಲಾಬಿ, ಹಸಿರು, ಮತ್ತು ಬಿಳಿ  ಶುಭ ಬಣ್ಣಗಳು.

(ಕೆಂಪು ಬಣ್ಣವನ್ನು ಉಪಯೋಗಿಸಬಾರದು)

ಶುಭ ವಾರಗಳು: ಶುಕ್ರವಾರ, ಬುಧವಾರ, ಶನಿವಾರ, ಸೋಮವಾರ ಮತ್ತು ಗುರುವಾರ ಶುಭ ಫಲಗಳನ್ನು ಕೊಡುತ್ತವೆ. 

ಶುಭ ರತ್ನಗಳು: ವಜ್ರ(Diamond), ನೀಲ(Sapphire) ಮತ್ತು ಪಚ್ಚೆ(Emerald) ಹರಳುಗಳು ಶುಭ ಫಲಗಳನ್ನು ಕೊಡುತ್ತವೆ. 

(ಆಧಾರ: ಜ್ಯೋತಿಷ ಸಾರ ತಿಲಕ, ಸಾರಾವಳಿ ಮತ್ತು ಸರ್ವಾರ್ಥ ಚಿಂತಾಮಣಿ)

Leave a comment

This site uses Akismet to reduce spam. Learn how your comment data is processed.