ಮೇಷ ಲಗ್ನದ ಗುಣಲಕ್ಷಣಗಳು

ಒಂದು ವ್ಯಕ್ತಿಯ ಜೀವನದ ಮುಖ್ಯ ವಿಷಯಗಳ ಬಗ್ಗೆ  ಹೇಳುವಾಗ ನುರಿತ ಜ್ಯೋತಿಷಿಗಳು ಜನ್ಮ ಲಗ್ನ,ಚಂದ್ರನಿರುವ ರಾಶಿ (ಜನ್ಮ ರಾಶಿ) ಮತ್ತು ಸೂರ್ಯನಿರುವ ರಾಶಿ ಇವುಗಳನ್ನು ಕೂಲಂಕುಷವಾಗಿ ಅಭ್ಯಾಸ ಮಾಡುತ್ತಾರೆ. ಇವೆಲ್ಲವುಗಳಲ್ಲಿ ಜನ್ಮ ಲಗ್ನ ಬಹಳ ಮುಖ್ಯವಾದದ್ದು.  ಏಕೆಂದರೆ ಒಂದು ಶಿಶುವು ತಾಯಿಯ ಗರ್ಭದಿಂದ ಭೂಮಿಗೆ ಬರುವ ಸಮಯದಲ್ಲಿ ಪೂರ್ವದಲ್ಲಿ ಉದಯವಾಗುವ ರಾಶಿಯು ಆ ಶಿಶುವಿನ  ಆತ್ಮಕ್ಕೆ ಮತ್ತು ಪ್ರಾಣಕ್ಕೆ  ಸಂಬಂದಿಸಿದ್ದಾಗಿರುತ್ತದೆ ಎಂದು ಸಾರಾವಳಿ ಮತ್ತು ಸರ್ವಾರ್ಥ ಚಿಂತಾಮಣಿ ಗ್ರಂಥಗಳಲ್ಲಿ ಹೇಳಲಾಗಿದೆ. ಆ ಜನ್ಮ ಲಗ್ನವು ಶಿಶುವಿನ ಆಯುಷ್ಯ, ಬಾಲ್ಯಾವಸ್ಥೆ, ವಿದ್ಯಭ್ಯಾಸ, ಆರೋಗ್ಯ, ಕುಟುಂಬ, ಉದ್ಯೋಗ ಇತ್ಯಾದಿಗಳನ್ನು ನಿರ್ಧರಿಸುತ್ತದೆ.

ಮನುಷ್ಯನು ಭೂಮಿಯ ಮೇಲೆ ಹುಟ್ಟುವ ಸಮಯದಲ್ಲಿ ಪೂರ್ವದಲ್ಲಿ ಉದಯವಾಗುವ ರಾಶಿಯು ಆ ಸ್ಥಳದ ಅಕ್ಷಾಂಶ ಮತ್ತು ರೇಖಾಂಶದ ಮೇಲೆ ಅವಲಂಬಿತವಾಗಿರುತ್ತದೆ.ಆದ್ದರಿಂದ ಯವುದೇ ವ್ಯಕ್ತಿಯ ಜಾತಕ ತಯಾರಿಸುವಾಗ ಹುಟ್ಟಿದ  ಸಮಯ, ಇಸವಿ ಮತ್ತು ಸ್ಥಳದ ಮಾಹಿತಿ ಬಹಳ ಮುಖ್ಯ.

ಹಲವಾರು ವ್ಯಕ್ತಿಗಳ ಜನ್ಮ ರಾಶಿ (ಚಂದ್ರನಿರುವ ರಾಶಿ) ಒಂದೇ ಇದ್ದರೂ ಸಹ ಅವರುಗಳು ಅನುಭವಿಸುವ ಫಲಗಳು ಒಂದೇ ಸಮನಾಗಿರುವುದಿಲ್ಲ. ಕಾರಣ ಅವರೆಲ್ಲರ ಜನ್ಮ ಸ್ಥಳ, ಲಗ್ನ, ಇಸವಿ ಮತ್ತು ಸಮಯಗಳು ಬೇರೆ ಬೇರೆ ಇರುತ್ತವೆ.  ಆದ್ದರಿಂದ ಜನ್ಮ ರಾಶಿಯೊಂದರಿಂದಲೇ ಎಲ್ಲವೂ ತೀರ್ಮಾನವಾಗುವುದಿಲ್ಲ. ಯವುದೇ ವ್ಯಕ್ತಿಯ ಜೀವನದ ಶುಭ ಮತ್ತು ಅಶುಭ ಫಲಗಳನ್ನು ಜಾತಕದಲ್ಲಿ ಜನ್ಮ ಲಗ್ನ ಮತ್ತು ಇತರ ಗ್ರಹಗಳ ಬಲಗಳ ಅಧಾರದ ಮೇಲೆ ಸೂಕ್ಷ್ಮವಾಗಿ ಅಭ್ಯಾಸ ಮಾಡಿ ಹೇಳಲಾಗುತ್ತದೆ.

ಹಿಂದಿನ ಸಂಚಿಕೆಯಲ್ಲಿ ಜಾತಕ ಲಗ್ನ ಮತ್ತು ಭಾವಗಳ ಬಗ್ಗೆ ತಿಳಿದಿದ್ದೆವು. ಈಗ ಜನ್ಮ ಲಗ್ನಗಳ ಗುಣಲಕ್ಷಣಗಳ ಬಗ್ಗೆ ತಿಳಿಯೋಣ.

ಸೂಚನೆ: ಈ ಕೆಳಗೆ ಕೊಟ್ಟಿರುವ  ಲಗ್ನ ವಿವರಗಳು ಸಾಮಾನ್ಯವಾಗಿವೆಹೆಚ್ಚಿನ ಸೂಕ್ಷ್ಮ ವಿವರಗಳನ್ನು ವಿದ್ಯಾವಂತ ಜ್ಯೊತಿಷಿಗಳ ಸಹಾಯದಿಂದ ತಿಳಿಯಬಹುದು.

ಇವತ್ತಿನ ಸಂಚಿಕೆಯಲ್ಲಿ   ಮೇಷ ಲಗ್ನದ ಬಗ್ಗೆ ತಿಳಿಯೋಣ. ಇದು ರಾಶಿ ಚಕ್ರದಲ್ಲಿ ಬರುವ ಮೊದಲನೆ ಮನೆ. ಇದು ಚರ ಲಗ್ನ. ಮಂಗಳನು ಈ ರಾಶಿಗೆ ಅಧಿಪತಿ ಮತ್ತು ಇಲ್ಲಿ ಸೂರ್ಯನು (ಬಲಿಷ್ಟ) ಉಚ್ಚನಾಗಿರುವನು. ಪ್ರತೀ ವರ್ಷ ಸೂರ್ಯನು ನಿರಯನ ಪದ್ದತಿಯ ಪ್ರಕಾರ ಅಂದಾಜು  13 ಎಪ್ರಿಲ್ ಇಂದ 14 ಮೇ ತಿಂಗಳವರೆಗೆ ಚಲಿಸುತ್ತಾನೆ. ಸಾಯನ ಪದ್ದತಿಯ ಪ್ರಕಾರ ಅಂದಾಜು  21 ಮಾರ್ಚ್ ಇಂದ 19 ಎಪ್ರಿಲ್ ತಿಂಗಳವರೆಗೆ ಚಲಿಸುತ್ತಾನೆ. ದಕ್ಷಿಣ ಭಾರತದಲ್ಲಿ ಸ್ಥಿರ ಅಥವಾ ನಿರಯನ ಕುಂಡಲಿಯಲ್ಲಿ ಮೇಷ ಲಗ್ನದ ಜಾತಕ (ಕುಂಡಲಿ) ಈ ರೀತಿಯಾಗಿ ಕಾಣುತ್ತದೆ.

ಉತ್ತರ  ಭಾರತೀಯ ಶೈಲಿಯ ಜಾತಕ ಅಥವಾ ಕುಂಡಲಿಯಲ್ಲಿ ಮೇಷ ಲಗ್ನದ ಜಾತಕ ಈ ರೀತಿಯಾಗಿ ಕಾಣುತ್ತದೆ.

ಸಾಮಾನ್ಯ  ಫಲಗಳು:

ಈ ಲಗ್ನದಲ್ಲಿ ಜನಿಸಿದವರು ಗಟ್ಟಿ ಮತ್ತು ಮಧ್ಯಮ ಗಾತ್ರದ ದೇಹ ಹೊಂದಿರುತ್ತಾರೆ. ಕೆಂಪು ಮೈ ಬಣ್ಣ, ಉದ್ದ ಮುಖ ಮತ್ತು ಅಗಲ ಹಣೆಯುಳ್ಳವರಾಗಿರುತ್ತಾರೆ.  ಇವರು ಬಹಳ ಸರಳ ಜೀವಿಗಳಾಗಿದ್ದು, ನೇರ ಮತ್ತು ಮನಬಿಚ್ಚಿ ಮಾತನಾಡುತ್ತಾರೆ. ಧೈರ್ಯಶಾಲಿಗಳು, ಮಹತ್ವಾಕಾಂಕ್ಷಿಗಳು ಮತ್ತು ಕೆಲವೊಮ್ಮೆ ವಿಕೋಪ ಸ್ವಭಾವಕ್ಕೆ ಒಳಗಾಗುತ್ತರೆ. ಒಳ್ಳೆಯ ಆಜ್ಞಾದಾಯಕ ಹುದ್ದೆ ಅಥವಾ ನಾಯಕತ್ವವನ್ನು  ನಿಭಾಯಿಸುವ ಸಾಮರ್ಥ್ಯ ಇವರಲ್ಲಿ ಇರುವುದು. ಸ್ವತಂತ್ರವಾಗಿರಲು ಇಷ್ಟಪಡುತ್ತಾರೆ. ಇವರು ಮನರಂಜನೆ ಮತ್ತು ಕಲೆಯನ್ನು ಇಷ್ಟಪಡುತ್ತಾರೆ. ಇವರ ಜೀವನದ ಮೊದಲ ಭಾಗದಲ್ಲಿ ಬಹಳ ಶ್ರಮ ಪಡುತ್ತಾರೆ. ಧಾರ್ಮಿಕ ಅಥವಾ ರಾಜಕೀಯ ನಾಯಕತ್ವ ವಹಿಸುವಲ್ಲಿ ಉತ್ಸಾಹಿಗಳಾಗಿರುತ್ತಾರೆ. ಪ್ರವಾಸ ಮತ್ತು ಪ್ರಯಾಣ ಮಾಡುವುದು ಇವರಿಗೆ ಪ್ರೀತಿ.

ಇವರು ತಮ್ಮ ವ್ಯಕ್ತಿತ್ವದಲ್ಲಿ ಹಠಾತ್ ಬದಲಾವಣೆ ಮಾಡಿಕೊಳ್ಳುತ್ತಾರೆ. ಇವರ ಜೀವನದ ಮೊದಲ ಭಾಗದಲ್ಲಿ ಬಹಳ ಕಷ್ಟಗಳನ್ನು ಎದುರಿಸುತ್ತಾರೆ. ನಂತರದಲ್ಲಿ ಉತ್ತಮ ಪ್ರಗತಿ ಕಾಣುತ್ತಾರೆ. ಕೆಲಸದ ಕಾರಣದಿಂದ ಇವರ ವಾಸ ಸ್ಥಳ ಪದೇ ಪದೇ ಬದಲಾಗಬಹುದು.

ಇವರು ಸುಖೀ ಕೌಟುಂಬಿಕ ಜೀವನ ನಡೆಸುತ್ತಾರೆ. ಇವರ ಜೀವನ ಸಂಗಾತಿ ಬುದ್ಧಿವಂತರೂ, ಸುಂದರವಾಗಿಯೂ ಮತ್ತು ಪ್ರಾಮಾಣಿಕರೂ ಆಗಿರುತ್ತಾರೆ. ಇವರಿಗೆ ಒಳ್ಳೆಯ ಮಿತ್ರರು ಮತ್ತು ದೊಡ್ಡ ಬಂಧು ವರ್ಗ ಇರುತ್ತದೆ. ಇವರು ತಮ್ಮ ಕುಟುಂಬಕ್ಕೆ ದೊಡ್ಡ ಬೆಂಬಲವಾಗಿ ಇರುತ್ತಾರೆ.

ಆರೋಗ್ಯ:

ಸಾಮಾನ್ಯವಾಗಿ ಇವರು ಒಳ್ಳೆಯ ಆರೋಗ್ಯ ಹೊಂದಿರುತ್ತಾರೆ. ಅವರ ದೇಹದಲ್ಲಿ ಪ್ರತಿರೋಧಕ ಶಕ್ತಿ ಚೆನ್ನಾಗಿರುತ್ತದೆ. ಅಜಾಗರೂಕತೆಯಿಂದ ಚಿಕ್ಕ ಪುಟ್ಟ ಗಾಯಗಳನ್ನು ಮಾಡಿಕೊಳ್ಳುತ್ತಾರೆ. ಇವರು ವಾಹನಗಳನ್ನು ಓಡಿಸುವಾಗ ಬಹಳ ಜಾಗ್ರತೆಯಿಂದ ಇರಬೇಕು. ತಲೆಗೆ ಪೆಟ್ಟಾಗಬಹುದು. ತಲೆ ಶೂಲೆ, ಜೀರ್ಣಾಂಗಗಳ ಸಮಸ್ಯೆಗಳು ಮತ್ತು ಮುಖ್ಯವಾಗಿ ಮೆದುಳಿಗೆ ರಕ್ತ ಸಂಚಾರದ ಕೊರತೆಗಳಿಂದ ಬಳಲುವ ಸಾಧ್ಯತೆಗಳಿವೆ. ಇವರು ಚಿಕ್ಕ ವಯಸ್ಸಿನಿಂದಲೇ ಆರೋಗ್ಯಕರವಾದ ಜೀವನ ಮಾಡುವುದನ್ನು ರೂಢಿಮಾಡಿಕೊಳ್ಳಬೇಕು. ನಿಯಮಿತ ಆಹಾರ, ವ್ಯಾಯಾಮ ಮತ್ತು ಪ್ರಯಾಣಾಮಗಳನ್ನು ಅಭ್ಯಾಸ ಮಾಡಿಕೊಳ್ಳಿ. ಇವರು ಅಹಾರ ಪ್ರಿಯರಾಗಿದ್ದರಿಂದ ಮಿತ ಆಹಾರದ ಬಗ್ಗೆ ಕಾಳಜಿ ವಹಿಸಬೇಕು. 

ಹಣಕಾಸು:

ಇವರು ಹಣಕಾಸಿನ ವಿಷಯದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ದುಂದುವೆಚ್ಚ ಮಾಡಬಾರದು ಮತ್ತು ವಿವೇಚನೆ ಇಲ್ಲದೇ ಹಣ ಹೂಡಿಕೆ ಮಾಡಬಾರದು.  ಇವರುಗಳ ಲೆಕ್ಕಾಚಾರ ಹೆಚ್ಚಾಗಿ ಅಸಮತೋಲನವಾಗಿರುತ್ತದೆ. ಯಾವುದೇ ಹಣಕಾಸಿನ ವಿಷಯ ಬಂದಾಗ ಶಾಂತ ರೀತಿಯಲ್ಲಿ ಯೋಚಿಸಿ, ಒಳ್ಳೆಯ ಸಲಹೆಯೊಂದಿಗೆ ಮುಂದುವರಿಯುವುದು ಉತ್ತಮ.

ಮುನ್ನೆಚ್ಚರಿಕೆ:

ಈ ಲಗ್ನದಲ್ಲಿ ಜನಿಸಿದವರು ಈ ಕೆಳಗಿನ ವಿಚಾರಗಳಲ್ಲಿ ಜಾಗ್ರತೆಯಾಗಿರಬೇಕು.

  1. ದೇಹಕ್ಕೆ ಸರಿಯಾದ ವಿಶ್ರಾಂತಿ  ಮತ್ತು ನಿದ್ದೆ ಅವಶ್ಯಕ. ನಿಮ್ಮ ಭಾವನೆಗಳನ್ನು, ಚಿಂತೆ ಮತ್ತು ಸಿಟ್ಟು ಇವುಗಳನ್ನು ಹತೋಟಿಯಲ್ಲಿ ಇಡಬೇಕು. ಇಲ್ಲದಿದ್ದರೆ ಇವುಗಳ ಒತ್ತಡಗಳಿಂದಾಗಿ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.
  2. ವಾಹನ ಚಲಿಸುವಾಗ ಮತ್ತು ಪ್ರಯಾಣ ಮಾಡುವಾಗ ಜಾಗ್ರತೆಯಿಂದ ಇರಬೇಕು.  ಅಜಾಗರೂಕತೆಯಿಂದ ಗಾಯಗಳನ್ನು ಮಾಡಿಕೊಳ್ಳುವಿರಿ.
  3. ಅನಾವಶ್ಯ ಖರ್ಚುಗಳನ್ನು ಕಡಿಮೆ ಮಾಡಿ. ಉಳಿತಾಯದ ಬಗ್ಗೆ ಯೋಜನೆ ಮಾಡಿ.
  4. ಬೇರೆಯವರ ಬಗ್ಗೆ ತಪ್ಪು ಕಲ್ಪನೆ ಅಥವಾ ಸೇಡಿನ ಭಾವನೆಗಳನ್ನು ಬೆಳೆಸಿಕೊಂಡು ವ್ಯಂಗವಾಗಿ ಮಾತಾಡಬಾರದು. ಇದರಿಂದ ಸಂಬಂಧಗಳು ಕೆಡಬಹುದು ಮತ್ತು ಅನಾವಶ್ಯವಾಗಿ ಕೋರ್ಟು ಕಛೇರಿಗಳಿಗೆ ಅಲೆಯಬೇಕಾಗಬಹುದು.
  5. ಆಲಸ್ಯತನದಿಂದ ಹೊರಗೆ ಬರಲು ಪ್ರಯತ್ನಿಸಿ. ನೀವು ಬಹಳಷ್ಟು ಕಲಿಯಬಹುದು ಮತ್ತು ಸಾಧಿಸಬಹುದು. ನಿಮ್ಮಾ ಜೀವನದಲ್ಲಿ ಸೋಮಾರಿತನವೇ ನಿಮ್ಮ ದೊಡ್ಡ ಶತ್ರು.
  6. ಚಿಕ್ಕ ವಯಸ್ಸಿನಿಂದಲೇ ಆರೋಗ್ಯಕರವಾದ ಜೀವನ ಮಾಡುವುದನ್ನು ರೂಢಿಮಾಡಿಕೊಳ್ಳಿ.  

ಮೇಷ ಲಗ್ನದವರಿಗೆ

ಶುಭ ಸಂಖ್ಯೆಗಳು: 9, 1, 4  8 ಮತ್ತು 2

ಶುಭ ಬಣ್ಣಗಳು: ಕೆಂಪು, ಹಳದಿ, ತಾಮ್ರ ಮತ್ತು ಬಂಗಾರ ಬಣ್ಣಗಳು.

ಕಪ್ಪು ಬಣ್ಣವನ್ನು ಉಪಯೋಗಿಸಬಾರದು.

ಶುಭ ವಾರಗಳು: ಮಂಗಳವಾರ, ಶನಿವಾರ, ಶುಕ್ರವಾರ, ಸೋಮವಾರ ಮತ್ತು ಭಾನುವಾರ. 

ಶುಭ ರತ್ನಗಳು:  ಹವಳ ಮತ್ತು ಮಾಣಿಕ್ಯ

(ಆಧಾರ: ಜ್ಯೋತಿಷ ಸಾರ ತಿಲಕ ಮತ್ತು ಸಾರಾವಳಿ)

Leave a comment

This site uses Akismet to reduce spam. Learn how your comment data is processed.