ಮಾಸಗಳು, ಅಧಿಕ ಮತ್ತು ಕ್ಷಯ ಮಾಸ

ಅನಾದಿ ಕಾಲಗಳಿಂದ ಭಾರತದಲ್ಲಿ ನಿರ್ಧಿಷ್ಠವಾದ ಸಮಯ, ವಾರ, ನಕ್ಷತ್ರ ಮತ್ತು ಪಕ್ಷಗಳನ್ನು ತಿಳಿಯಲು ಪಂಚಾಂಗವೆಂಬ ಕೈಪಿಡಿ ಉಪಯೋಗಿಸಲಾಗುತ್ತಿತ್ತು.ಈಗಲೂ ನಾವುಗಳು ಉಪಯೋಗಿ ಸುತ್ತಿದ್ದೇವೆ. ಈ ಪಂಚಾಂಗವನ್ನು ಸೂರ್ಯ ಮತ್ತು ಚಂದ್ರರ ಚಲನೆಗಳ ಆಧಾರದ ಮೇಲೆ ರಚಿಸಲಾಗಿದೆ. ಸುಮಾರು 4ನೇ ಶತಮಾನದಲ್ಲಿ ಬರೆದ “ಸೂರ್ಯ ಸಿದ್ಧಾಂತ” ಎಂಬ ಸಂಸ್ಕೃತ ಗ್ರಂಥವು ಗಣಿತ ಮತ್ತು ಖಗೋಲ ಶಾಸ್ತ್ರದ ಅಧ್ಯಯನವನ್ನೊಳಗೊಂಡ ಪಂಚಾಂಗ ಮತ್ತು ಜ್ಯೊತಿಷ್ಯದ  ಬಗ್ಗೆ ತಿಳಿಸಿಕೊಡುತ್ತದೆ. ಆ ಸಮಯದಲ್ಲೇ ಜನರಿಗೆ ಸೂರ್ಯ ಮತ್ತು ಚಂದ್ರರ ಗ್ರಹಣಗಳ ಬಗ್ಗೆಯೂ ಅರಿವಿತ್ತು.

 “ಸೂರ್ಯ ಸಿದ್ಧಾಂತ” ಗ್ರಂಥದಲ್ಲಿ ಜ್ಯಾಮಿತಿ ಮತ್ತು ತ್ರಿಕೋನಮಿತಿ ಎಂಬ ಪದ್ದತಿಗಳ ಉಲ್ಲೇಖವಿದೆ. ಸಂಸ್ಕೃತದಲ್ಲಿ ಜ್ಯಾ ಅಂದರೆ ಭೂಮಿ ಮತ್ತು ಮಿತಿ ಅಂದರೆ ಅಳೆ ಎಂದರ್ಥ. ಅದು ಈಗಿನ ಜಿಯಾಮೆಟ್ರಿ (Geometry). ತ್ರಿ ಅಂದರೆ ಮೂರು ಮತ್ತು ಕೋನಮಿತಿ ಅಂದರೆ ಕೋನವನ್ನು ಅಳೆ ಎಂದರ್ಥ. ಅದು ಈಗಿನ ಟ್ರಿಗ್ನೊಮೆಟ್ರಿ (Trigonometry). ಬಹಳ ಕಾಲಗಳಿಂದ ಭಾರತವು ಜಗತ್ತಿಗೆ ಎಷ್ಟೋ ವಿಷಯಗಳನ್ನು ಪ್ರಥಮ ಬಾರಿಗೆ ಕಂಡು ಹಿಡಿದು ಪರಿಚಯಿಸಿದೆ. ಅವುಗಳಲ್ಲಿ ಜ್ಯಾಮಿತಿ ಮತ್ತು ತ್ರಿಕೋನಮಿತಿ ಸಹ ಸೇರಿವೆ. ಅವುಗಳನ್ನುಮುಂದೆ ಸುಮಾರು 15 ಅಥವಾ 16 ನೇ ಶತಮಾನದಲ್ಲಿ ಯುರೋಪ ರಾಷ್ಟ್ರಗಳಿಗೆ ಪರಿಚಯಿಸಲಾಯಿತು. ನಮ್ಮ ಪೂರ್ವಜರ ಬಗ್ಗೆ ನಾವು ಎಷ್ಟು ಹೆಮ್ಮೆ ಪಡಬೇಕಲ್ಲವೆ?

ಮೊದಲೇ ತಿಳಿಸಿದಂತೆ ಪಂಚಾಂಗವನ್ನು ಸೂರ್ಯ ಮತ್ತು ಚಂದ್ರರ ಚಲನೆಗಳ ಆಧಾರದ ಮೇಲೆ ರಚಿಸಲಾಗಿದೆ. ಚಂದ್ರನ ಚಲನೆಯಿಂದ ಉಂಟಾಗುವ ಹುಣ್ಣಿಮೆ ಮತ್ತು ಅಮವಾಸ್ಯೆಗಳನ್ನೊಳಗೊಂಡು ಮಾಸಗಳನ್ನು ಅಂದರೆ ತಿಂಗಳುಗಳನ್ನು ರಚಿಸಲಾಯಿತು. ಭಾರತದಲ್ಲಿ ಅಮಂತ ಮತ್ತು ಪೂರ್ಣಿಮಂತ ಎಂಬ ಎರಡು ಪದ್ಧತಿಗಳನ್ನು ಅನುಸರಿಸಲಾಗುತ್ತದೆ. ಅಮಾಂತ ಎಂದರೆ ಮಾಸವು ಶುಕ್ಲ ಪಕ್ಷ ಪ್ರತಿಪದೆಯಿಂದ ಪ್ರಾರಂಭವಾಗಿ ಕೃಷ್ಣ ಪಕ್ಷ ಅಮವಾಸ್ಯೆಯ ದಿನ ಕೊನೆಗೊಳ್ಳುತ್ತದೆ. ಪೂರ್ಣಿಮಾಂತ ಎಂದರೆ ಮಾಸವು ಕೃಷ್ಣ ಪಕ್ಷ ಪ್ರತಿಪದೆಯಿಂದ  ಶುಕ್ಲ ಪಕ್ಷ ಪೂರ್ಣಿಮೆಯ ದಿನ ಕೊನೆಗೊಳ್ಳುತ್ತದೆ. ಅಮಾಂತ ಮಾಸವು ಹೆಚ್ಚು ಬಳಕೆಯಲ್ಲಿದೆ. ಭಾರತದಲ್ಲಿ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಪಂಚಾಂಗದ ಬಳಕೆ ರೂಢಿಯಲ್ಲಿದೆ.

12 ಮಾಸಗಳನ್ನು ಒಟ್ಟುಗೂಡಿಸಿ ಚಾಂದ್ರಮಾನ ಒಂದು ವರ್ಷ ಎಂದು ಕರೆಯಲಾಯಿತು. ಈ ಒಂದು ಚಂದ್ರಮಾನ ವರ್ಷಕ್ಕೆ ಸಂವತ್ಸರ ಎಂತಲೂ ಕರೆಯುತ್ತಾರೆ. ಇದರ ಬಗ್ಗೆ ಮುಂದೆ ಇನ್ನೂ ಹೆಚ್ಚಿನ ಅಂಶ ತಿಳಿಯೋಣ. 12 ಮಾಸಗಳು ಈ ಕೆಳಗಿನಂತಿವೆ.

ಚೈತ್ರ, ವೈಶಾಖ, ಜ್ಯೇಷ್ಠ, ಆಷಾಢ, ಶ್ರಾವಣ, ಭಾದ್ರಪದ, ಆಶ್ವೀಜ, ಕಾರ್ತೀಕ, ಮಾರ್ಗಶೀರ್ಷ, ಪುಷ್ಯ, ಮಾಘ, ಮತ್ತು ಫಾಲ್ಗುಣ.

ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ನಿರ್ಧಿಷ್ಟ ಸಮಯದಲ್ಲಿ ಚಲಿಸುತ್ತಾನೆ. ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಚಲಿಸುವುದಕ್ಕೆ ಸಂಕ್ರಮಣವೆಂದು ಕರೆಯುತ್ತಾರೆ. ಈ ಚಲನೆ ಅಂದಾಜು 30 ದಿನಗಳದ್ದಾಗಿರುತ್ತದೆ. ಇವುಗಳನ್ನು ಸೌರಮಾನ ಮಾಸಗಳೆಂದು ಗುರುತಿಸಿ ಅವುಗಳಿಗೆ ರಾಶಿಗಳ ಹೆಸರನ್ನು ಸೂಚಿಸಲಾಗಿದೆ. ಅವುಗಳನ್ನು ಮೇಷ ಮಾಸ, ವೃಷಭ ಮಾಸ, ಮಿಥುನ ಮಾಸ, ಕರ್ಕ ಮಾಸ, ಸಿಂಹ ಮಾಸ, ಕನ್ಯಾ ಮಾಸ, ತುಲಾ ಮಾಸ, ವೃಶ್ಚಿಕ ಮಾಸ, ಧನು ಮಾಸ, ಮಕರ ಮಾಸ, ಕುಂಭ ಮಾಸ ಮತ್ತು ಮೀನ ಮಾಸ ಎಂದು ಹೆಸರಿಡಲಾಗಿದೆ.

ಅಧಿಕ ಮಾಸ ಎಂದರೇನು?

ಚಾಂದ್ರಮಾನ ಮಾಸವು 29.5 ದಿನಗಳದ್ದಾಗಿದ್ದು, 12 ಮಾಸಗಳಿಗೆ ಒಟ್ಟು 354 ದಿನಗಳಾಗಿ ಒಂದು ವರ್ಷವಾಗುತ್ತದೆ. ಸೌರಮಾನದ ಒಂದು ವರ್ಷವು 365 ದಿನಗಳು. ಚಾಂದ್ರಮಾನ ಮತ್ತು ಸೌರಮಾನ ವರ್ಷಗಳೆರಡಕ್ಕೂ 11 ದಿನಗಳ ವ್ಯತ್ಯಾಸ ಬರುತ್ತದೆ. ಈ ವ್ಯತ್ಯಾಸವನ್ನು ಸರಿದೂಗಿಸಲು ಒಂದು ಮಾಸವನ್ನು ಸೇರಿಸಲಾಯಿತು. ಅದಕ್ಕೆ ಅಧಿಕ ಮಾಸ ಎಂದು ಕರೆಯಲಾಯಿತು.

ವಶಿಷ್ಠ ಮಹರ್ಷಿಯ “ವಶಿಷ್ಠ ಸಿದ್ಧಾಂತ” ಗ್ರಂಥದ ಪ್ರಕಾರ ಅಧಿಕ ಮಾಸವು ಪ್ರತೀ 32 ತಿಂಗಳು, 16 ದಿನಗಳು ಮತ್ತು 8 ಘಟಿಗಳಿಗೆ ಬರುತ್ತದೆ.ಘಟಿ ಎಂದರೆ 24 ನಿಮಿಷಗಳು. ಇದು ಅತಿ ನಿಖರವಾದ ಲೆಕ್ಕಾಚಾರವೆಂದು ಪರಿಗಣಿಸಲಾಗಿದೆ. ಗಮನಿಸಬೇಕಾದ ಅಂಶವೆಂದರೆ ಅಧಿಕ ಮಾಸದಲ್ಲಿ ಸೂರ್ಯ ಸಂಕ್ರಮಣವಿರುವುದಿಲ್ಲ.  ಸಾಮಾನ್ಯವಾಗಿ ಅಧಿಕ ಮಾಸವು ಎರಡು ಸೂರ್ಯ ಸಂಕ್ರಮಣಗಳ ಮಧ್ಯೆ ಬರುತ್ತದೆ.

ಕ್ಷಯ ಮಾಸ ಎಂದರೇನು?

ಹೀಗೆ ಸೌರಮಾನ ಮತ್ತು ಚಾಂದ್ರಮಾನ ಮಾಸಗಳನ್ನು ಸರಿದೂಗಿಸಲು ಒಂದು ಮಾಸವನ್ನು ಕೂಡಿಸುತ್ತಾ ಬಂದಾಗ, ಇದನ್ನು ಚಾಂದ್ರಮಾನ ಮತ್ತು ಸೌರಮಾನ ವರ್ಷಗಳೆರಡಕ್ಕೂ ಸಮನಾಗಿ ಮಾಡಲು ನಮ್ಮ ಪೂರ್ವ ವಿದ್ವಾಂಸರು ಸೂಕ್ತ ಸಮಯದಲ್ಲಿ ಒಂದು ಸಂವತ್ಸರದಲ್ಲಿ ಒಂದು ಚಾಂದ್ರಮಾನ ಮಾಸವನ್ನು ಕಡಿಮೆ ಮಾಡುವ ಪದ್ಧತಿಯನ್ನು ಅನುಸರಣೆ ಮಾಡಿದರು. ಆಚರಣೆಗೆ ಒಳಗಾಗದ ಮಾಸವನ್ನು ಕ್ಷಯ ಮಾಸ ಎಂದು ಕರೆದರು. ಸಂಸ್ಕೃತದಲ್ಲಿ ಕ್ಷಯ ಎಂದರೆ ಕಡಿಮೆ ಎಂದರ್ಥ. ಕ್ಷಯ ಮಾಸವು ಬಹಳ ಅಪರೂಪ ಮತ್ತು ಇದು ಒಂದು ಸಂವತ್ಸರದಲ್ಲಿ ೧೧ ಚಾಂದ್ರಮಾನ ಮಾಸಗಳು ಇರುವಾಗ ಮಾತ್ರ ಸಂಭವಿಸುವುದು.

ನಮ್ಮ ಪೂರ್ವ ಪಂಚಾಂಗ ಕತೃಗಳು ಬಹಳ ವಿಷ್ಲೇಷಣೆ ಮಾಡಿ ಕ್ಲಿಷ್ಟಕರ ಗಣಿತ ಲೆಕ್ಕಾಚಾರಗಳಿಂದ ಶತಮಾನಗಳ ನಂತರವೂ ಅಧಿಕ ಮತ್ತು ಕ್ಷಯ ಮಾಸಗಳನ್ನು ಕಂಡು ಹಿಡಿಯುವ ಪದ್ಧತಿಯನ್ನು ತಿಳಿಸಿಕೊಟ್ಟಿದ್ದಾರೆ. ಕ್ಷಯ ಮಾಸವು ಪ್ರತಿ 141 ವರ್ಷಗಳಿಗೊಮ್ಮೆ ಮತ್ತು ನಂತರ 19 ವರ್ಷಗಳಿಗೆ ಪುನರಾವರ್ತನಗೊಳ್ಳುತ್ತದೆ. ಪೂರ್ವದಲ್ಲಿ 1983 ರಲ್ಲಿ ಕ್ಷಯ ಮಾಸ ಸಂಭವಿಸಿತ್ತು. ನಂತರ ಮುಂದೆ 2124 ನೇ ಇಸ್ವಿಯಲ್ಲಿ ಕ್ಷಯ ಮಾಸ ಬರುವುದು. ಕ್ಷಯ ಮಾಸದಲ್ಲಿ ಎರಡು ಸೂರ್ಯ ಸಂಕ್ರಮಣಗಳು ಸಂಭವಿಸುತ್ತವೆ. ನಮ್ಮ ಪಂಚಾಂಗ ಗಣಿತದ ಪ್ರಕಾರ ಕ್ಷಯ ಮಾಸವು ಸಾಮಾನ್ಯವಾಗಿ ಕಾರ್ತೀಕ, ಮಾರ್ಗಶೀರ್ಷ ಮತ್ತು ಪುಷ್ಯ ಮಾಸಗಳಲ್ಲಿ ಬರುವುದು. ಅಧಿಕ ಮಾಸವು ಫಾಲ್ಗುಣ ಮಾಸದಿಂದ ಅಶ್ವಯುಜ ಮಾಸದವರೆಗೂ ಬರುತ್ತದೆ. ಹೀಗಾಗಿ ಕಾರ್ತೀಕ ಮಾಸವು ಕ್ಷಯ ಮಾಸ ಮತ್ತು ಅಧಿಕ  ಎರಡೂ ಮಾಸವಾಗಿ ಸಂಭವಿಸುವ ಅರ್ಹತೆ ಹೊಂದಿದೆ. ಪಂಚಾಂಗ ಗಣಿತವು ಸ್ವಯಂ ತಿದ್ದುಪಡಿ ಮಾಡುವ ಪದ್ಧತಿ ಹೊಂದಿರುವುದರಿಂದ ಯಾವ ಸಂವತ್ಸರದಲ್ಲಿ ಕ್ಷಯ ಮಾಸ ಸಂಭವಿಸುವುದೊ ಆಗ ಎರಡು ಅಧಿಕ ಮಾಸಗಳು ಇರುತ್ತವೆ.

ಈವರೆಗೆ ನಾವು ಭಾರತೀಯ ಪದ್ಧತಿಯಲ್ಲಿ ಪಂಚಾಂಗದಲ್ಲಿ ಬರುವ ತಿಥಿಗಳು, ಪಕ್ಷಗಳು, ವಾರಗಳು, ನಕ್ಷತ್ರಗಳು, ಮಾಸಗಳು ಮತ್ತು ಸಂಕ್ರಮಣ ಎಂದರೇನು ಎಂದು ತಿಳಿದಿದ್ದೇವೆ. ವೇದಕಾಲಗಳಲ್ಲಿಯೇ ಇವುಗಳ ರಚನೆಯಗಿದ್ದು ಈಗಿನ ಖಗೋಲ ವಿಜ್ಞಾನಕ್ಕೆ ಸರಿಸಮನಾಗಿದೆ ಎನ್ನುವ ಅಂಶ ನಿಜವಾಗಿಯೂ ಅದ್ಭುತವೇ ಸರಿ. ಮುಂದೆ ಇನ್ನೂ ಹೆಚ್ಚಿನ ಅಂಶಗಳನ್ನು ತಿಳಿಯೋಣ.

Leave a comment

This site uses Akismet to reduce spam. Learn how your comment data is processed.