ಸೂರ್ಯನ ಮೂಲದಿಂದ ಶಕ್ತಿಯನ್ನು ಹೀರಿ ಪ್ರಭಾವ ಬೀರುವ ಆಕಾಶ ಕಾಯಗಳಿಗೆ ಗ್ರಹಗಳು ಎಂದು ಕರೆಯಲಾಯಿತು.ಗ್ರಹಗಳು ಆಕಾಶ ಮಂಡಲದಲ್ಲಿ ಭೂಮಿ ಮತ್ತು ಸೂರ್ಯರಂತೆ ಘನ ಗಾತ್ರ ಉಳ್ಳ ಕಾಯಗಳು. ಗ್ರಹ ಎಂದರೆ ಗ್ರಹಿಸು ಎಂದರ್ಥ.
ಜ್ಯೋತಿಷದಲ್ಲಿ ಗ್ರಹಗಳಿಗೆ ಬಹಳ ಮಹತ್ವವಿದೆ. ಗ್ರಹಗಳು ನಮ್ಮ ಕರ್ಮಫಲಗಳನ್ನು ನಾವು ಅನುಭವಿಸುವಂತೆ ಮಾಡುವವರು ಎಂಬ ನಂಬಿಕೆ ಇದೆ. ಋಗ್ವೇದದಲ್ಲಿ ಕೆಲ ಶ್ಲೋಕಗಳು ಗ್ರಹಗಳ ಚಲನೆ ಮತ್ತು ಮನುಷ್ಯನ ಮೇಲೆ ಅವರ ಪ್ರಭಾವಗಳನ್ನು ವಿವರಿಸುತ್ತವೆ. ಸೂರ್ಯನು ತನ್ನ ಆಕರ್ಷಣ ಬಲದಿಂದ ಭೂಮಿ ಮತ್ತು ಇತರ ಗ್ರಹಗಳನ್ನು ಅವುಗಳದ್ದೇ ಆದ ಕಕ್ಷೆಗಳಲ್ಲಿ ತನ್ನ ಸುತ್ತ ಸುತ್ತುವಂತೆ ನಿಯಂತ್ರಿಸುತ್ತಿದ್ದಾನೆ. ಅವುಗಳಲ್ಲಿ ಭೂಮಿಯೂ ಸಹ ಸೇರಿದೆ.ಗ್ರಹಗಳ ವೇಗವು ಸೂರ್ಯ ಮತ್ತು ಆಯಾ ಗ್ರಹದ ದೂರದ ಅಳತೆಯ ಮೇಲೆ ನಿರ್ಧರಿತವಾಗಿದೆ.
ವೇದವು ತಿಳಿಸುವುದೇನೆಂದರೆ ಸೂರ್ಯನು ಸೌರಮಂಡಲದ ಮಧ್ಯದಲ್ಲಿ ಆಕರ್ಷಣೆಯ ಬಲವಾಗಿದ್ದಾರೂ ಸಹ ಉಳಿದ ಗ್ರಹಗಳು ವೃತ್ತಾಕಾರದಲ್ಲಿ ಸುತ್ತುತ್ತಾ ಇಲ್ಲ. ಅವು ಅಂಡಾಕಾರದಲ್ಲಿ ಸುತ್ತುತ್ತಾ ಇವೆ. ನ್ಯೂಟನ್ ನ ಎರಡನೆಯ ನಿಯಮ ಮತ್ತು ಕೆಪ್ಲರ್ ನ ನಿಯಮಗಳು ವೇದಗಳಲ್ಲಿ ಪ್ರಕಟಿಸಿರುವ ಸಿದ್ಧಾಂತಕ್ಕೆ ಸರಿ ಸಮನಾಗಿ ಹೋಲುತ್ತವೆ ಎಂದು ಅನೇಕರ ಅಭಿಪ್ರಾಯ. ಆಶ್ಚರ್ಯಕರ ಸಂಗತಿ ಎಂದರೆ ವೇದಗಳು ಈ ವಿಜ್ಞಾನಿಗಳಿಗಿಂತ ನೂರಾರು ವರ್ಷಗಳ ಮುಂಚೆ ರಚಿತವಾಗಿವೆ.ಈ ವಿಷಯಗಳನ್ನು ತಿಳಿಯುತ್ತಾ ಹೋದರೆ ವೇದವು ವಿಜ್ಞಾನದ ಭಂಡಾರ ಎಂಬುದರಲ್ಲಿ ಸಂಶಯವಿಲ್ಲ.
ಸೂರ್ಯ ಸಿದ್ಧಾಂತದಲ್ಲಿ ಸೂರ್ಯನ ಮತ್ತು ಇತರ ಗ್ರಹಗಳ ಜ್ಯಾಮಿತೀಯ ಅಳತೆ, ಅಕ್ಷರೇಖೆ ಮತ್ತು ದೂರ ಇತ್ಯಾದಿಗಳ ಉಲ್ಲೇಖವಿದೆ. ಪ್ರಾಚೀನ ಖಗೋಳ ವಿಜ್ಞಾನದ ಪ್ರಕಾರ 9 ಗ್ರಹಗಳು ವಾಯುಮಂಡಲದಲ್ಲಿ ಅತಿ ಮುಖ್ಯ ಪಾತ್ರ ವಹಿಸುತ್ತವೆ. ಇವುಗಳೇ ನವಗ್ರಹಗಳು. ಅವು ಈ ರೀತಿಯಾಗಿವೆ. ರವಿ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು ಮತ್ತು ಕೇತು. ಇವುಗಳಲ್ಲಿ ಸೂರ್ಯ ಚಂದ್ರರು ಪ್ರಕಾಶ ಗ್ರಹಗಳು ಮತ್ತು ಬುಧ, ಮಂಗಳ, ಗುರು, ಶುಕ್ರ, ಶನಿ ಇವುಗಳನ್ನು ತಾರಾಗ್ರಹಗಳೆಂತಲೂ ಮತ್ತು ರಾಹು ಮತ್ತು ಕೇತು ಛಾಯಾ ಗ್ರಹಗಳೆಂದು ಹೇಳಲಾಗಿದೆ. ರಾಹು ಮತ್ತು ಕೇತು ಇವುಗಳಿಗೆ ಬೇರೆ ಗ್ರಹಗಳ ಹಾಗೆ ಘನ ಗಾತ್ರದ ಶರೀರವಿಲ್ಲ. ಇವು ವಾಯುಮಂಡಲದ ಎರಡು ಊಹಾ ಬಿಂದುಗಳು. ಸೂರ್ಯನ ಕಾಂತಿವೃತ್ತದ ಪಥ ಮತ್ತು ಚಂದ್ರನ ಪಥ ಎರಡೂ ಉತ್ತರ ಮತ್ತು ದಕ್ಷಿಣದಲ್ಲಿ ಒಂದನ್ನೊಂದು ಎರಡು ಬಿಂದುಗಳಲ್ಲಿ ಸಂಧಿಸುತ್ತವೆ. ಈ ಬಿಂದುಗಳಲ್ಲಿ ಉತ್ತರ ದಿಕ್ಕಿನದು ರಾಹು ಮತ್ತು ದಕ್ಷಿಣ ದಿಕ್ಕಿನದು ಕೇತು ಎನ್ನಲಾಗಿದೆ.
ಒಬ್ಬ ಅಸುರ ಸ್ವರಭಾನುವಿನ ತಲೆಯನ್ನು ವಿಷ್ಣು ಕತ್ತರಿಸಿದ ನಂತರ ಅವನ ತಲೆ ಮತ್ತು ದೇಹ ಒಂದು ಹಾವಿನ ಜೊತೆ ಸೇರಿ, ತಲೆಯಿಲ್ಲದ ದೇಹವನ್ನು ಕೇತು ಮತ್ತು ದೇಹವಿಲ್ಲದ ತಲೆಯನ್ನು ರಾಹು ಎಂದು ರಚಿಸಲಾಗಿದೆ ಎಂಬ ವಿಷಯ ಜ್ಯೋತಿಷದಲ್ಲಿ ಮತ್ತು ಪುರಾಣಗಳಲ್ಲಿ ಉಲ್ಲೇಖವಿದೆ.
ಬಹಳ ಹಿಂದಿನಿಂದಲೂ ಜನರು ಈ ನವಗ್ರಹಗಳನ್ನು ತಮ್ಮ ಜೀವನದಲ್ಲಿ ಬರುವ ತೊಂದರೆಗಳು, ಅಡೆತಡೆಗಳು ಮತ್ತು ಅಶುಭ ಫಲಗಳ ನಿವಾರಣೆಗಾಗಿ ಪೂಜಿಸುತ್ತಾ ಬಂದಿದ್ದಾರೆ. ಈಗಲೂ ಸಹ ಸಾಮಾನ್ಯ ಎಲ್ಲ ದೇವಸ್ಥಾನಗಳಲ್ಲಿ ನವಗ್ರಹಗಳನ್ನು ಕಾಣಬಹುದು. ಜ್ಯೋತಿಷ ಶಾಸ್ತ್ರದಲ್ಲಿ ಈ ನವ ಗ್ರಹಗಳನ್ನು ಅವುಗಳ ಶಕ್ತಿ, ಪ್ರಕೃತಿ ಮತ್ತು ಗುಣಲಕ್ಷಣಗಳ ಆಧಾರದ ಮೇಲೆ ದೇವತೆಗಳನ್ನಾಗಿ ಗುರುತಿಸಲಾಗಿದೆ. ವೈದಿಕ ಶಾಸ್ತ್ರದಲ್ಲಿ ಈ ಗ್ರಹಗಳ ಬಗ್ಗೆ ಪರಿಹಾರಾರ್ಥವಾಗಿ ಬಹಳ ಆಳವಾದ ಅಧ್ಯಯನವೇ ಇದೆ.
ಜ್ಯೋತಿಷವು ಈ ನವ ಗ್ರಹಗಳ ಸ್ಥಾನ ಮತ್ತು ಚಲನೆಗಳ ಆಧಾರದ ಮೇಲೆ ಜಗತ್ತಿನ ಹವಾಮಾನ ವೈಪರೀತ್ಯಗಳು, ವ್ಯವಹಾರಿಕ ಏಳು ಬೀಳು ಮತ್ತು ಪ್ರತಿಯೊಬ್ಬ ಮನುಷ್ಯನ ಮೇಲೆ ಆಗುವ ಪರಿಣಾಮಗಳನ್ನು ವಿವರಿಸುತ್ತದೆ. ಭೂಮಿಯಲ್ಲಿನ ಸಮಸ್ತ ನಡೆಯಲ್ಲೂ ಗ್ರಹಗಳ ಪ್ರಭಾವವಿದೆ ಎಂದು ಜ್ಯೋತಿಷ ಹೇಳುತ್ತದೆ. ಆದ್ದರಿಂದ ಗ್ರಹಗಳ ಅಧ್ಯಯನವೇ ಜ್ಯೋತಿಷ ಶಾಸ್ತ್ರ. ಮನುಷ್ಯನ ಹುಟ್ಟಿದ ಸಮಯದಲ್ಲಿ ಗ್ರಹಗಳ ಸ್ಥಾನಗಳು ಅವನ ಜೀವನದ ಶುಭ, ಅಶುಭ ಫಲಗಳು ಮತ್ತು ಜೀವಿತಾವಧಿ ತಿಳಿಸುತ್ತವೆ.
ಜ್ಯೋತಿಷ ಶಾಸ್ತ್ರದ ಪ್ರಕಾರ ರಾಹು ಮತ್ತು ಕೇತುವಿನ ಹೊರತಾಗಿ ಉಳಿದ ಏಳೂ ಗ್ರಹಗಳು ರಾಶಿಚಕ್ರದ 12 ಮನೆಗಳನ್ನು ಆಳುತ್ತಾರೆ. ಅವುಗಳು ಹೀಗಿವೆ.
ರವಿ – ಸಿಂಹ ರಾಶಿಯ ಅಧಿಪತಿ
ಚಂದ್ರ – ಕರ್ಕ ರಾಶಿಯ ಅಧಿಪತಿ
ಮಂಗಳ – ಮೇಷ ಮತ್ತು ವೃಶ್ಚಿಕ ರಾಶಿಗಳ ಅಧಿಪತಿ
ಬುಧ – ಮಿಥುನ ಮತ್ತು ಕನ್ಯಾ ರಾಶಿಗಳ ಅಧಿಪತಿ
ಗುರು – ಧನು ಮತ್ತು ಮೀನ ರಾಶಿಗಳ ಅಧಿಪತಿ
ಶುಕ್ರ – ವೃಷಭ ಮತ್ತು ತುಲಾ ರಾಶಿಗಳ ಅಧಿಪತಿ
ಶನಿ – ಮಕರ ಮತ್ತು ಕುಂಭ ರಾಶಿಗಳ ಅಧಿಪತಿ
ಗ್ರಹಗಳು ತಾವು ಚಲಿಸುವ ರಾಶಿಯ ಲಕ್ಷಣಗಳನ್ನು ಪಡೆಯುತ್ತಾರೆ. ಈ ಗ್ರಹಗಳಿಗೆ 12 ರಾಶಿಗಳಲ್ಲಿ ಉಚ್ಚ ಮತ್ತು ನೀಚ ಸ್ಥಾನಗಳನ್ನು ಕೊಡಲಾಗಿದೆ. ಸೂರ್ಯನು ಗ್ರಹಗಳಿಗೆ ಅಧಿಪತಿಯಾಗಿರುವದರಿಂದ ಜಾತಕದಲ್ಲಿ ಸೂರ್ಯನ ಸ್ಥಾನ ಬಹಳ ಪ್ರಾಮುಖ್ಯತೆ ಪಡೆಯುತ್ತದೆ. ಸೂರ್ಯ ಗ್ರಹವೊಂದೇ ಸೌರಮಂಡಲದ ಸುಮಾರು 99 ಪ್ರತಿಶತ ದ್ರವ್ಯರಾಶಿ ಹೊಂದಿದೆ. ದ್ಯುತಿಸಂಶ್ಲೇಷಣೆಯ ಮೂಲಕ ಸೂರ್ಯನ ಬೆಳಕು ಭೂಮಿಯ ಎಲ್ಲ ಜೀವ ರಾಶಿಗಳಿಗೂ ಜೀವದಾನ ನೀಡಿದೆ. ಭೂಮಿಯ ಹವಾಮಾನವೂ ಸಹ ಸೂರ್ಯನ ಕಿರಣಗಳಿಂದಲೇ ಪ್ರಭಾವಿತವಾಗಿದೆ. ಭೂಮಿಯ ಮೇಲ್ಮೈಗೆ ಸೂರ್ಯನ ಕಿರಣಗಳೇ ಶಕ್ತಿಯ ಮೂಲ. ಮುಂದಿನ ಭಾಗಗಳಲ್ಲಿ ಈ ಗ್ರಹಗಳ ಲಕ್ಷಣ ಮತ್ತು ಮನುಷ್ಯನ ಜೀವನದಲ್ಲಿ ಯಾವ ರೀತಿಯಲ್ಲಿ ಪ್ರಭಾವ ಬೀರುತ್ತವೆ ಎಂದು ತಿಳಿಯೋಣ.
(ಆಧಾರ: ಋಗ್ವೇದಾದಿಭಾಷ್ಯಭೂಮಿಕಾ, ಸೂರ್ಯ ಸಿದ್ಧಾಂತ)
