ರಾಶಿ ಮತ್ತು ನಕ್ಷತ್ರಗಳು

ನಾವು ಆಕಾಶ ಮಂಡಲದಲ್ಲಿ ಬೇರೆ ಗ್ರಹದ ಮೇಲಿಂದ ಭೂಮಿಯನ್ನು ನೋಡಿದಾಗ ಅದು ಗೋಳಾಕಾರದ ಚೆಂಡಿನಂತೆ ಇದ್ದು ತನ್ನದೇ ಆದ ಕಕ್ಷೆಯಲ್ಲಿ ಸೂರ್ಯನ ಸುತ್ತಲೂ ಸುತ್ತುತ್ತಾ ಇರುವುದು ಕಂಡುಬರುತ್ತದೆ. ಚಂದ್ರ ಗ್ರಹವು ಭೂಮಿಯ ಉಪಗ್ರಹವಾಗಿದ್ದು, ಭೂಮಿಯ ಸುತ್ತಲೂ ತಿರುಗುತ್ತದೆ.

ಸೂರ್ಯನು ಆಗಸದಲ್ಲಿ ವರ್ಷದುದ್ದಲೂ ಚಲಿಸುವ ಗೋಚರ ಪಥಕ್ಕೆ ಕಾಂತಿವೃತ್ತವೆಂದು ಹೆಸರು.ಈ ಕಾಂತಿವೃತ್ತದ ಎರಡೂ ಕಡೆಗಳಲ್ಲಿ ೯ ಡಿಗ್ರಿಗಳಷ್ಟು ವ್ಯಾಪಿಸಿರುವ ವಲಯಕ್ಕೆ ಭಚಕ್ರ ಎಂದು ಕರೆಯುತ್ತಾರೆ. ಈ ಭಚಕ್ರವು ಭೂಮಿಯ ಸುತ್ತ ಆವರಿಸಿರುವ ಒಂದು ಕಾಲ್ಪನಿಕ ವೃತ್ತ ವಲಯ. ಈ ವೃತ್ತಾಕಾರದ ವಲಯದಲ್ಲಿ ಹಾದು ಹೋಗುವ ಗ್ರಹಗಳ ಅಧ್ಯಯನ ಮಾಡಲಾಗುತ್ತದೆ. ಈ ಭಚಕ್ರವು ಪ್ರತೀ ದಿನ ಒಂದು ಬಾರಿ ತನ್ನ ಅಕ್ಷದ ಮೇಲೆ ಪೂರ್ವದಿಂದ ಪಶ್ಚಿಮಕ್ಕೆ ತಿರುಗುತ್ತದೆ. ಭಚಕ್ರದ ಒಟ್ಟು ವ್ಯಾಪ್ತಿ ೩೬೦ ಡಿಗ್ರಿಗಳಷ್ಟು ಇದೆ. ಇದನ್ನು ೧೨ ವಿಭಾಗಗಳಾಗಿ ವಿಂಗಡಿಸಲಾಗಿದೆ. ಈ ೧೨ ಭಾಗಗಳನ್ನು ರಾಶಿ ಎಂದು ಕರೆಯಲಾಗಿದೆ. ಪ್ರತಿಯೊಂದು ರಾಶಿಯ ವ್ಯಾಪ್ತಿಯು ೩೦ ಡಿಗ್ರಿಗಳಷ್ಟು ಇದೆ. ಒಂದು ರಾಶಿಯನ್ನು ಅಂದರೆ ೩೦ ಡಿಗ್ರಿ ವ್ಯಾಪ್ತಿಯನ್ನು ಒಂದು ಸೌರಮಾನ ತಿಂಗಳು ಅಂದರೆ ಸೂರ್ಯನು ೩೦ ದಿನಗಳಲ್ಲಿ ಕ್ರಮಿಸುವ ಪಥ ಪ್ರದೇಶವೆಂತಲೂ ಕರೆಯುತ್ತಾರೆ.

ಪ್ರತಿಯೊಂದು ರಾಶಿಯ ವಲಯದಲ್ಲಿ ವಿವಿಧ ನಕ್ಷತ್ರಗಳ ಪುಂಜ(ಗುಂಪು)ಗಳು ಇವೆ. ಇವುಗಳನ್ನು ನಾವು ಆಕಾಶದಲ್ಲಿ ಸುಲಭವಾಗಿ ಗುರುತಿಸಬಹುದು. ನಮ್ಮ ಪೂರ್ವ ಮಹರ್ಷಿಗಳು ಈ ನಕ್ಷತ್ರಗಳ ಗುಂಪಿನ ಆಕೃತಿಯ ಆಧಾರದ ಮೇಲೆ ರಾಶಿಗಳಿಗೆ ಹೆಸರುಗಳನ್ನು ಇಟ್ಟಿದ್ದಾರೆ. ಅವುಗಳು ಕ್ರಮವಾಗಿ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ.

ನಕ್ಷತ್ರವೊಂದು ಹುಟ್ಟುವುದಕ್ಕೆ ಬಹಳ ಸಹಸ್ರ ಸಂವತ್ಸರಗಳ ಕ್ರಿಯೆ ಅವಶ್ಯಕ. ಸೂರ್ಯನು ಭೂಮಿಗೆ ಹತ್ತಿರದ ನಕ್ಷತ್ರ. ನಕ್ಷತ್ರಗಳು ಗ್ರಹಗಳಂತೆ ಸೂರ್ಯ ಮಂಡಲದಲ್ಲಿ ಇರುವುದಿಲ್ಲ. ನಕ್ಷತ್ರಗಳು ಕೋಟಿ ಕೋಟಿ ಮೈಲಿಗಳ ದೂರದಲ್ಲಿ ಇರುತ್ತವೆ. ಅವುಗಳಿಂದ ಹೊರಟ ಬೆಳಕು ಭೂಮಿಯನ್ನು ಮುಟ್ಟಲು ಬಹಳ ವರ್ಷಗಳೇ ಬೇಕು ಎಂದು ವಿಜ್ಞಾನ ಹೇಳುತ್ತದೆ.

ನಕ್ಷತ್ರಗಳು ರಾಶಿ ಚಕ್ರಗಳ ಉಪವಿಭಾಗಗಳಾಗಿವೆ. ನಕ್ಷತ್ರಗಳು ೧೩ ಡಿಗ್ರಿ ೨೦ ನಿಮಿಷಗಳ ವಿಭಾಗಗಳಾಗಿವೆ. ಈ ನಕ್ಷತ್ರಗಳು ಮೇಷ ರಾಶಿಯಲ್ಲಿ ಶೂನ್ಯದಿಂದ ಪ್ರಾರಂಭವಾಗಿ ಮೀನ ರಾಶಿಯಲ್ಲಿ ಅಂತ್ಯಗೊಳ್ಳುತ್ತವೆ. ಒಟ್ಟು ೩೬೦ ಡಿಗ್ರಿಗಳನ್ನು ಹೊಂದಿರುತ್ತವೆ. ಅದರಲ್ಲಿ ೨೭ ಭಾಗ ಮಾಡಿದರೆ ೨೭ ನಕ್ಷತ್ರಗಳ ಸ್ಥಾನಗಳು ಆಗುತ್ತವೆ. ಈ ನಕ್ಷತ್ರಗಳಿಗೆ ಈ ರೀತಿಯಾಗಿ ಹೆಸರುಗಳನ್ನು ಕೊಡಲಾಗಿದೆ.

ಅಶ್ವಿನಿ, ಭರಣಿ, ಕೃತ್ತಿಕಾ, ರೋಹಿಣಿ, ಮೃಗಶಿರಾ, ಆರಿದ್ರಾ, ಪುನರ್ವಸು, ಪುಷ್ಯ, ಆಶ್ಲೇಷಾ, ಮಖಾ, ಪೂರ್ವಾ ಫಾಲ್ಗುಣ, ಉತ್ತರಾ ಫಾಲ್ಗುಣ, ಹಸ್ತಾ, ಚಿತ್ತಾ, ಸ್ವಾತಿ, ವಿಶಾಖ, ಅನುರಾಧಾ, ಜ್ಯೇಷ್ಠಾ, ಮೂಲ, ಪೂರ್ವಾಷಾಢ, ಉತ್ತರಾಷಾಢ, ಶ್ರವಣ, ಧನಿಷ್ಠಾ, ಶತಭಿಷಾ, ಪೂರ್ವಭಾದ್ರಪದ, ಉತ್ತರಾಭಾದ್ರಪದ, ರೇವತಿ.

ಪ್ರತಿಯೊಂದು ನಕ್ಷತ್ರವು ಭಚಕ್ರದ 13°20’  ಆವರಿಸಿದೆ. ಪ್ರತಿಯೊಂದು ನಕ್ಷತ್ರವು ೪ ಭಾಗಗಳಲ್ಲಿ 3°20’  ಯಂತೆ ವಿಂಗಡಿಸಲಾಗಿದೆ. ಈ ಭಾಗಕ್ಕೆ ಪಾದ ಅಥವಾ ಚರಣ ಎಂತಲೂ ಕರೆಯುತ್ತಾರೆ.  ೨೭ ನಕ್ಷತ್ರಗಳ ಎಲ್ಲ ಪಾದಗಳೂ ಸೇರಿದರೆ ಒಟ್ಟು ೧೦೮ ಪಾದಗಳು ಆಗುತ್ತವೆ.

ಚಂದ್ರನು ಅಂದಾಜು ಪ್ರತಿದಿನ ಒಂದು ನಕ್ಷತ್ರದಂತೆ ಒಂದು ತಿಂಗಳಲ್ಲಿ ಈ ೨೭ ನಕ್ಷತ್ರಗಳಲ್ಲಿ ಸಂಚರಿಸುತ್ತಾನೆ. ಯಾವುದೇ ವ್ಯಕ್ತಿಯ ಜನ್ಮ ಕಾಲದಲ್ಲಿ ಚಂದ್ರನು ಯಾವ ನಕ್ಷತ್ರದಲ್ಲಿರುತ್ತಾನೋ ಅದು ಅವರ ನಕ್ಷತ್ರವಾಗುತ್ತದೆ. ಯಾವ ವ್ಯಕ್ತಿಯ ಜನ್ಮ ಕಾಲದಲ್ಲಿ ಚಂದ್ರನು ಯಾವ ರಾಶಿಯಲ್ಲಿರುತ್ತಾನೋ ಅದು ಅವರ ಜನ್ಮ ರಾಶಿಯೆಂದು ಪರಿಗಣಿಸುತ್ತಾರೆ. ಮುಂದಿನ ಭಾಗದಲ್ಲಿ ಇನ್ನೂ ಹೆಚ್ಚಿನ ಅಂಶಗಳನ್ನು ತಿಳಿಯೋಣ.

Leave a comment

This site uses Akismet to reduce spam. Learn how your comment data is processed.