ಜ್ಯೋತಿಷ

ಸಮಾನ್ಯವಾಗಿ ಎಲ್ಲರಿಗೂ ಜ್ಯೋತಿಷದ ಬಗ್ಗೆ ಹಲವಾರು ಪ್ರಶ್ನೆಗಳು ಉದ್ಭವಿಸುತ್ತವೆ.  ಜ್ಯೋತಿಷ ಎಂದರೇನು, ಗ್ರಹಗಳು ಭೂಮಿಯ ಮೇಲಿರುವ ಮನುಷ್ಯನ ಜೀವನದ ಮೇಲೆ ಹೇಗೆ ಪ್ರಭಾವ ಬೀರುತ್ತವೆ, ಮತ್ತು ಜ್ಯೋತಿಷದ ಉದ್ಭವ ಯಾವಾಗ ಆಯಿತು, ರಾಶಿ, ನಕ್ಷತ್ರ ಮತ್ತು ಲಗ್ನ ಎಂದರೇನು? ರಾಶಿ ಫಲ ಮತ್ತು ಲಗ್ನ ಫಲಗಳು ಹೇಗೆ ಪ್ರಭಾವ ಬೀರುತ್ತವೆ ಹೀಗೆ ಹಲವಾರು ಪ್ರಶ್ನೆಗಳಿವೆ. ಇವೆಲ್ಲವುಗಳನ್ನು ವೈಜ್ಞಾನಿಕವಾಗಿ ಅರ್ಥಮಾಡಿಕೊಳ್ಳಬಹುದೆ? ಹಾಗಾದರೆ ಮೊದಲು ಜ್ಯೋತಿಷದ ಇತಿಹಾಸ ತಿಳಿಯುವುದು ಅತ್ಯವಶ್ಯ.

ಜ್ಯೋತಿಷ ಎಂಬ ಶಬ್ದ ಸಂಸ್ಕೃತದ “ಜ್ಯೋತಿ” ಶಬ್ದದಿಂದ ಬಂದಿದೆ. ಜ್ಯೋತಿ ಎಂದರೆ ಬೆಳಕು ಎಂದರ್ಥ. ಆದ್ದರಿಂದ ಜ್ಯೋತಿಷದಲ್ಲಿ ಭೂಮಿಯಿಂದ ಸೂರ್ಯನ  ಚಲನೆ, ಖಗೋಳ ಶಾಸ್ತ್ರದ ಗಣಿತಗಳನ್ನೊಳಗೊಂಡ ಪದ್ದತಿಯಿಂದ ಮನುಷ್ಯನ ಜೀವನದ ಆಗು ಹೋಗುಗಳ ಬಗ್ಗೆ ಅಭ್ಯಾಸ ಮಾಡಲಾಗುತ್ತದೆ.

ಜ್ಯೋತಿಷವು ಭಾರತದ ಅತಿ ಪ್ರಾಚೀನ ವಿಜ್ಞಾನವಾಗಿದೆ. ಇದನ್ನು ಸಮಯದ ಲೆಕ್ಕಾಚಾರ, ದಿನದಲ್ಲಿ ಶುಭ ಮತ್ತು ಅಶುಭ ಘಳಿಗೆಗಳನ್ನು ಕಂಡುಹಿಡಿಯಲು ಮತ್ತು ಮಾಸ, ವರ್ಷಗಳನ್ನು ಲೆಕ್ಕಾಚಾರ ಹಾಕಲು ಬಳಕೆ ಮಾಡುತ್ತಿದ್ದರು. ಈಗಲೂ ಸಹ ಧಾರ್ಮಿಕ ಕಾರ್ಯಗಳಿಗೆ ಇದೇ ಪ್ರಾಚೀನ ಪದ್ಧತಿಯನ್ನು ಬಳಸುತ್ತಿದ್ದೇವೆ.

ಜ್ಯೋತಿಷವು ಪ್ರಪಂಚದ ಅತಿ ಹಳೆಯ ಪದ್ಧತಿಗಳಲ್ಲಿ ಒಂದಾಗಿದೆ. ಜ್ಯೋತಿಷವು ವೇದಗಳ ಒಂದು ಭಾಗ. ಜ್ಯೋತಿಷವನ್ನು ವೇದಗಳ ಕಣ್ಣು ಎಂದು ಕರೆಯುತ್ತಾರೆ. ಏಕೆಂದರೆ ಜ್ಯೋತಿಷವು ಮನುಷ್ಯನ ಜೀವನದ ಉದ್ದೇಶ, ಮಾನವನ ಪ್ರಜ್ಞೆ ಮತ್ತು ಜೀವನದ ಆಧ್ಯಾತ್ಮಿಕ ಮಾರ್ಗಗಳನ್ನು ತೋರಿಸಿಕೊಡುತ್ತದೆ. ಇದು ಮನುಷ್ಯರಿಗೆ ಜೀವನದ ಪಾಠಗಳನ್ನು ಸುಲಲಿತವಾಗಿ ಕಲಿತು ಅವುಗಳನ್ನು ಒಪ್ಪಿಕೊಳ್ಳಲು ಮಾನಸಿಕ ಜಾಗೃತಿ ಮೂಡಿಸುತ್ತದೆ.

ವೇದಗಳು ಭಾರತದ ಧಾರ್ಮಿಕ ಗ್ರಂಥಗಳು. ಒಟ್ಟು 4 ವೇದಗಳಿವೆ. ಅವುಗಳು ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವಣ ವೇದ. ಇವು ಭಾರತದ ಹಿಂದೂ ಧರ್ಮದ ಅತೀ ಪ್ರಾಚೀನ ಸಂಸ್ಕೃತ ಸಾಹಿತ್ಯ ಮತ್ತು ಗ್ರಂಥಗಳು. ಶತಮಾನಗಳ ಮೊದಲು ಈ ವೇದಗಳನ್ನು ಅರ್ಥ ಮಾಡಿಕೊಳ್ಳಲು ಮತ್ತು ವ್ಯಾಖ್ಯಾನಿಸಲು 6 ವೇದಾಂಗಗಳನ್ನು ರಚಿಸಲಾಯಿತು. ಆ ವೇದಾಂಗಗಳು ಹೀಗಿವೆ: ಶಿಕ್ಷಾ, ಛಂದಸ್ಸು, ವ್ಯಾಕರಣ, ನಿರುಕ್ತ, ಕಲ್ಪ ಮತ್ತು ಜ್ಯೋತಿಷ. ಆದ್ದರಿಂದ ಜ್ಯೋತಿಷವು ವೇದಗಳ ಒಂದು ಅಂಗವಾಗಿದೆ.

ಜ್ಯೋತಿಷದಲ್ಲಿ ಮೂರು ಶಾಖೆಗಳಿವೆ. ಅವುಗಳು ಗಣಿತ, ಸಂಹಿತ ಮತ್ತು ಹೋರಾ.

ಗಣಿತ: ಈ ಶಾಖೆಯಲ್ಲಿ ಖಗೋಳ ಶಾಸ್ತ್ರದ ಸಂಕೀರ್ಣ ಗಣಿತವನ್ನೊಳಗೊಂಡಿದೆ. ಇದರಲ್ಲಿ ಗ್ರಹಗಳ ಸ್ಥಾನಗಳ ಮತ್ತು ಗ್ರಹಣಗಳು ಉಂಟಾಗುವ ಲೆಕ್ಕಾಚಾರಗಳನ್ನು ಮಾಡಲಾಗುತ್ತದೆ. ಈಗಲೂ ನಮಗೆ  ಸುಮಾರು ೫ನೇ ಶತಮಾನದಲ್ಲಿ ಬರೆದ ಖ್ಯಾತ ಖಗೋಳ ಶಾಸ್ತ್ರದ ಗ್ರಂಥ “ಸೂರ್ಯ ಸಿದ್ಧಾಂತ” ವು ಲಭ್ಯವಾಗಿದೆ.

ಸಂಹಿತ: ಈ ಶಾಖೆಯು ಮನುಷ್ಯನ ಜೀವನವು ಬಾಹ್ಯ ಪ್ರಕೃತಿಯ ಜೊತೆಗೆ ಹೇಗೆ ಅವಲಂಬಿತವಾಗಿದೆ ಎಂಬುದನ್ನು ತಿಳಿಸುತ್ತದೆ. ಇದು ವಾತಾವರಣದಲ್ಲಿಯ ಬದಲಾವಣೆಗಳು, ನೆರೆ, ನೈಸರ್ಗಿಕ ವೈಪರೀತ್ಯಗಳು, ಕೃಷಿ ಉತ್ಪನ್ನಗಳು, ರಾಜಕೀಯ ವಿಷಯಗಳು, ಆಚರಣೆಗಳು ಮತ್ತು ಇತರೆ ಹಲವಾರು ವಿಷಯಗಳ ಬಗ್ಗೆ ಮಾಹಿತಿ ಕೊಡುತ್ತದೆ. “ಬೃಹತ ಸಂಹಿತ” ಎಂಬ ಗ್ರಂಥವು ಸಂಹಿತ ವಿಭಾಗದ ಅತಿ ಮುಖ್ಯ ಗ್ರಂಥವಾಗಿದೆ.

ಹೋರಾ: ಈ ಭಾಗವು ವೈಯಕ್ತಿಕ ಜಾತಕ ಮತ್ತು ಮುಹೂರ್ತ ವಿಷಯಗಳನ್ನು ವಿವರವಾಗಿ ತಿಳಿಯಪಡಿಸುತ್ತದೆ. ವೈಯಕ್ತಿಕ ಜಾತಕವನ್ನು ಮನುಷ್ಯನ ಆಯುಷ್ಯ, ಆರೋಗ್ಯ, ಮತ್ತು ಜೀವನದ ಇತರ ಮುಖ್ಯ ವಿಷಯಗಳನ್ನು ತಿಳಿಯಲು  ಅಭ್ಯಾಸ ಮಾಡಲಾಗುತ್ತದೆ. ಮುಹೂರ್ತ ವಿಭಾಗವನ್ನು ಮನುಷ್ಯನ ಜೀವನದಲ್ಲಿ ಶುಭ ಫಲಗಳನ್ನು ಪಡೆಯಲು ದಿನದಲ್ಲಿ ಶುಭ ಘಳಿಗೆಯನ್ನು ಕಂಡು ಹಿಡಿಯಲು ಉಪಯೋಗ ಮಾಡುತ್ತಾರೆ.

ಪೂರ್ವ ಕಾಲದಲ್ಲಿ ಋಷಿಗಳು ಆಕಾಶ ಕಾಯಗಳನ್ನು ತೀಕ್ಷ್ಣವಾಗಿ ಅಭ್ಯಾಸ ಮಾಡುತ್ತಿದ್ದರು. ಅವರು ಚಂದ್ರ ಮತ್ತು ಭೂಮಿಯ ಚಲನೆಯಿಂದ ವಾತಾವರಣದಲ್ಲಿ ಉಂಟಾಗುವ ಬದಲಾವಣೆಗಳನ್ನು ಕಂಡುಹಿಡಿದರು. ಇವುಗಳ ಚಲನೆಗಳನ್ನು ಅನುಸರಿಸಿ ಋತು, ಮಾಸ, ಅವಧಿಗಳನ್ನು ದಿನನಿತ್ಯ ಅನುಸರಿಸಲು ಪಂಚಾಂಗ ಎಂಬ ಕೈಪಿಡಿ ತಯಾರಿಸಿಕೊಂಡರು. ವೈದಿಕ ಯಾಗ ಮತ್ತು ಯಜ್ಞಗಳನ್ನು ಮಾಡಲು ಶುಭ ಮುಹೂರ್ತವನ್ನು ಈ ಪಂಚಾಂಗವನ್ನು ಬಳಸಿ ಕಂಡುಹಿಡಿಯುತ್ತಿದ್ದರು.

ಮಹರ್ಷಿ ಲಗಧ ಇವರು ವೇದಾಂಗ ಜ್ಯೋತಿಷದ ಮೂಲ ಕತೃ ಎಂಬ ಉಲ್ಲೇಖವಿದೆ. ಪರಾಶರ, ವಶಿಷ್ಠ, ಬೃಗು, ಗರ್ಗ, ಭಾಸ್ಕರಾಚಾರ್ಯ, ಆರ್ಯಭಟ ಮತ್ತು ಇನ್ನೂ ಅನೇಕರು ಬಹಳ ಪ್ರಖ್ಯಾತ ವಿದ್ವಾಂಸರಾಗಿದ್ದರು. ನಮಗೆ ಅತಿ ಪ್ರಾಚೀನ ಜ್ಯೋತಿಷ, ಗಣಿತ  ಮತ್ತು ಖಗೋಳ ಶಾಸ್ತ್ರದ ಸಂಸ್ಕೃತ ಗ್ರಂಥಗಳು ಲಭ್ಯವಿವೆ. ಅವುಗಳಲ್ಲಿ ಬೃಹತ್ ಪರಾಶರ ಹೊರಾ ಶಾಸ್ತ್ರ, ಸಾರಾವಳಿ, ಜಾತಕ ಪಾರಿಜಾತ, ಸರ್ವಾರ್ಥ ಚಿಂತಾಮಣಿ ಮತ್ತು ಹೋರಾಸರ ಲಭ್ಯವಿವೆ.

ಮುಂದಿನ ವಿಭಾಗದಲ್ಲಿ ಇನ್ನೂ ಹೆಚ್ಚಿನ ವಿಷಯಗಳನ್ನು ತಿಳಿಯೋಣ.

Advertisements

Leave a comment

This site uses Akismet to reduce spam. Learn how your comment data is processed.