ನಮ್ಮ ಪೂರ್ವಜರು ಮತ್ತು ನಾವುಗಳೆಲ್ಲ ಹುಟ್ಟಿದಾಗಿನಿಂದ ವಾರ, ಪಕ್ಷ ಮತ್ತು ತಿಥಿಗಳ ಬಗ್ಗೆ ಕೇಳುತ್ತಾ ಬಂದಿದ್ದೇವೆ. ಅದನ್ನೇ ಕೂಡ ಅನುಸರಿಸುತ್ತಾ ಇದ್ದೇವೆ. ಹಾಗಾದರೆ ಈ ಇವುಗಳ ಉದ್ಭವ ಹೇಗಾಯಿತು? ಯಾವ ಆಧಾರಗಳ ಮೇಲೆ ಇವುಗಳನ್ನು ರಚಿಸಲಾಗಿದೆ ಎಂದು ತಿಳಿಯೋಣ.
ಕ್ರಿಸ್ತಶಕ ಸಮಯಕ್ಕಿಂತಲೂ ಸಾವಿರಾರು ವರ್ಷಗಳಿಗೆ ಮೊದಲು ಭಾರತದಲ್ಲಿ ಸಮಯ ಮತ್ತು ಸಮಯವನ್ನು ಅಳೆಯುವ ಪದ್ಧತಿ ಇತ್ತು ಎಂದು ವೇದಗಳ ಮುಖಾಂತರ ತಿಳಿಯಲ್ಪಡುತ್ತೇವೆ. ಅಷ್ಟೊಂದು ವರ್ಷಗಳ ಮೊದಲೇ ನಮ್ಮ ಪೂರ್ವಜರಿಗೆ ಗ್ರಹಗಳ ಚಲನೆ, ಗ್ರಹಣಗಳ ಉಂಟಾಗುವಿಕೆ, ಋತುಗಳಲ್ಲಿ ಬದಲಾವಣೆ ಇವುಗಳೆಲ್ಲದರ ಜ್ಞಾನವಿತ್ತು.
ಭೂಮಿಯು ತನ್ನ ಅಕ್ಷದ ಮೇಲೆ ತಿರುಗಲು ಅಂದಾಜು ೨೪ ಘಂಟೆಗಳು ಬೇಕು. ಈ ಸಮಯಕ್ಕೆ ಒಂದು ದಿನವೆಂದು ಪರಿಗಣಿಸಲಾಯಿತು. ಸಂಸ್ಕೃತದಲ್ಲಿ ವಾಸರ ಎಂದರೆ ತಿರುಗುವಿಕೆ ಎಂದರ್ಥ. ಹೀಗಾಗಿ ಸಂಸ್ಕೃತದಲ್ಲಿ ವಾರಗಳಿಗೆ ರವಿವಾಸರಹ, ಸೋಮವಾಸರಹ, ಮಂಗಲವಾಸರಹ,ಬುಧವಾಸರಹ, ಗುರುವಾಸರಹ, ಶುಕ್ರವಾಸರಹ ಮತ್ತು ಶನಿವಾಸರಹ ಎಂಬ ಹೆಸರಿವೆ. ಕ್ರಮೇಣ ಆಡು ಭಾಷೆಯಲ್ಲಿ ಅವುಗಳು ರವಿವಾರ, ಸೋಮವಾರ, ಮಂಗಳವಾರ, ಬುಧವಾರ, ಗುರುವಾರ, ಶುಕ್ರವಾರ ಮತ್ತು ಶನಿವಾರ ಎಂದಾದವು. ಒಂದು ದಿನವನ್ನು ೬೦ ಘಟಿಗಳಲ್ಲಿ ವಿಂಗಡಿಸಲಾಗಿದೆ. ಮುಂದೆ ಹೋದರೆ ೧ ಘಟಿಯಲ್ಲಿ ಮತ್ತೆ ೬೦ ಪಳದಲ್ಲಿ ವಿಭಜಿಸಲಾಗಿದೆ. ೧ ಘಟಿ ಅಂದರೆ ೨೪ ನಿಮಿಷಗಳು. ಮತ್ತು ೧ ಪಳ ಅಂದರೆ ೨೪ ಸೆಕೆಂಡುಗಳು. ಈ ವಿಭಜನೆ ಹೇಗೆ ಮುಂದುವರಿದಿದೆ.
ಚಂದ್ರನು ಭೂಮಿಯ ಸುತ್ತಲೂ ತಿರುಗಿ ಸೂರ್ಯನ ಸುತ್ತಲೂ ತಿರುಗಲು ೩೬೫.೨೫ ದಿನಗಳು ಬೇಕು. ಚಂದ್ರನು ಭೂಮಿಯ ಸುತ್ತ ತಿರುಗುವ ಸಮಯದಲ್ಲಿ ೪ ಭಾಗಗಳನ್ನಾಗಿ ವಿಂಗಡಿಸಿದರೆ ಪ್ರತೀ ಭಾಗವೂ ಅಂದಾಜು ೭ ದಿನಗಳಾಗಿರುತ್ತದೆ. ಸೂರ್ಯ ಸಿದ್ಧಾಂತದ ಪ್ರಕಾರ ಗ್ರಹಗಳ ವೇಗಗಳ ಆಧಾರದ ಮೇಲೆ ಪ್ರತೀ ದಿನಕ್ಕೆ ಒಂದು ಗ್ರಹದ ಹೆಸರಿಡಲಾಗಿದೆ ಎಂದು ತಿಳಿಯಲಾಗಿದೆ.ಈ ವಿಷಯಕ್ಕೆ ಸಂಬಂಧ ಪಟ್ಟ ದಾಖಲೆಗಳು ಲಭ್ಯ ಇಲ್ಲವಾದ್ದರಿಂದ ಇಷ್ಟು ಮಾತ್ರ ತಿಳಿಯಲು ಸಾಧ್ಯವಾಗಿದೆ. ಬೇರೆ ಬೇರೆ ದೇಶಗಳಲ್ಲಿ ಅವರದ್ದೇ ಆದ ವಿವರಣೆಗಳಿವೆ.
ಚಂದ್ರ ಗ್ರಹವು ಭೂಮಿಯನ್ನು ಒಂದು ಸುತ್ತು ಸುತ್ತಲು ಅಂದಾಜು ೨೮ ರಿಂದ ೩೦ ದಿನಗಳು ಬೇಕು. ಈ ೩೦ ದಿನಗಳಲ್ಲಿ ಚಂದ್ರನು ಮೊದಲ ೧೫ ದಿನಗಳು ವೃದ್ದಿಸುತ್ತಾ ಶುಭ್ರವಾಗಿ ಕಾಣುತ್ತಾನೆ. ನಂತರದ ೧೫ ದಿನಗಳು ಕ್ಷೀಣಿಸುತ್ತಾ ಕಣ್ಣಿಗೆ ಕಾಣದಂತಾಗುತ್ತಾನೆ. ಈ ೧೫ ದಿನಗಳ ಬದಲಾವಣೆಗೆ ಪಕ್ಷಗಳೆಂದು ಕರೆದರು. ಈ ಪಕ್ಷಗಳಿಗೆ ಚಂದ್ರನು ಭೂಮಿಯಿಂದ ಕಾಣುವ ರೀತಿಗೆ ಅನುಗುಣವಾಗಿ ಶುಕ್ಲ(ಬಿಳಿ) ಪಕ್ಷ ಮತ್ತು ಕೃಷ್ಣ(ಕಪ್ಪು) ಪಕ್ಷ ಎಂದು ಕರೆಯಲಾಯಿತು. ಸಂಸ್ಕೃತದಲ್ಲಿ ಪಕ್ಷ ಎಂದರೆ ಪಕ್ಕ ಅಥವಾ ಬದಿ ಎಂದರ್ಥ. ಅಂದರೆ ಚಂದ್ರನು ಭೂಮಿಯನ್ನು ಸುತ್ತುವ ಗತಿಯಲ್ಲಿ ಎರಡು ಪಕ್ಕಗಳಿವೆ. ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷ ಎರಡೂ ಸೇರಿ ಒಂದು ಮಾಸ(ತಿಂಗಳು) ಎಂದು ಗುರುತಿಸಲಾಯಿತು.೨೪ ಪಕ್ಷಗಳು ಸೇರಿ ಒಂದು ವರ್ಷವೆಂದು ಕರೆದರು.
ಮೇಲೆ ಹೇಳಿದಂತೆ ಒಂದು ಮಾಸದಲ್ಲಿ ೩೦ ದಿನಗಳು ಇರುತ್ತವೆ. ಈ ದಿನಕ್ಕೆ ತಿಥಿ ಎಂದು ಕರೆಯಲಾಯಿತು. ತಿಥಿಯನ್ನು ವೈಜ್ಞಾನಿಕವಾಗಿ ರೂಪಿಸಲಾಗಿದೆ. ಚಂದ್ರ ಮತ್ತು ಸೂರ್ಯರ ರೇಖಾಂಶಗಳ(Longitude)ವ್ಯತ್ಯಾಸಗಳಿಂದ ತಿಥಿಯನ್ನು ಅಳೆಯಲಾಗುತ್ತದೆ. ಅಂದರೆ ಚಂದ್ರ ಮತ್ತು ಸೂರ್ಯರ ನಡುವಿನ ರೇಖಾಂಶ ಕೋನವು ೧೨ ಡಿಗ್ರಿಯಷ್ಟು ಹೆಚ್ಚಲು ತೆಗೆದುಕೊಳ್ಳುವ ಸಮಯ.
ಶುಕ್ಲ ಪಕ್ಷದಲ್ಲಿ ಮತ್ತು ಕೃಷ್ಣ ಪಕ್ಷದಲ್ಲಿ ಕ್ರಮವಾಗಿ ೧೫ ತಿಥಿಗಳಿವೆ. ಅವುಗಳಿಗೆ ಈ ರೀತಿಯಾಗಿ ಹೆಸರಿಸಲಾಗಿದೆ.
ಶುಕ್ಲ ಪಕ್ಷದಲ್ಲಿ: ಪಾಡ್ಯ(ಪ್ರತಿಪದ), ಬಿದಿಗೆ(ದ್ವಿತೀಯ), ತೃತೀಯ, ಚತುರ್ಥಿ, ಪಂಚಮಿ, ಷಷ್ಠಿ, ಸಪ್ತಮಿ, ಅಷ್ಟಮಿ, ನವಮಿ, ದಶಮಿ, ಏಕಾದಶಿ, ದ್ವಾದಶಿ, ತ್ರಯೋದಶಿ, ಚತುರ್ದಶಿ, ಹುಣ್ಣಿಮೆ.
ಕೃಷ್ಣ ಪಕ್ಷದಲ್ಲಿ: ಪಾಡ್ಯ(ಪ್ರತಿಪದ), ಬಿದಿಗೆ(ದ್ವಿತೀಯ), ತೃತೀಯ, ಚತುರ್ಥಿ, ಪಂಚಮಿ, ಷಷ್ಠಿ, ಸಪ್ತಮಿ, ಅಷ್ಟಮಿ, ನವಮಿ, ದಶಮಿ, ಏಕಾದಶಿ, ದ್ವಾದಶಿ, ತ್ರಯೋದಶಿ, ಚತುರ್ದಶಿ, ಅಮವಾಸ್ಯೆ.
ಪಕ್ಷಗಳಲ್ಲಿ ಬರುವ ತಿಥಿಗಳು ಸಂಸ್ಕೃತದ ಸಂಖ್ಯೆಗಳನ್ನು ಸೂಚಿಸುತ್ತವೆ. ನಮ್ಮಲ್ಲಿ ಹೆಚ್ಚಿನ ಹಬ್ಬಗಳು ಈ ತಿಥಿಗಳನ್ನು ಅವಲಂಬಿಸಿಯೇ ಮಾಡಲಾಗಿದೆ. ಮುಂದಿನ ಸಂಚಿಕೆಯಲ್ಲಿ ಇನ್ನೂ ಹೆಚ್ಚಿನ ವಿವರ ತಿಳಿಯೋಣ.
